Wednesday, August 10, 2022

Latest Posts

ಕೊಡಗು| ಅಕಾಲಿಕ ಮಳೆ: ಬೆಳೆ ಪರಿಹಾರಕ್ಕೆ ಕಾಂಗ್ರೆಸ್ ಒತ್ತಾಯ

ಹೊಸದಿಗಂತ ವರದಿ, ಕೊಡಗು:

ಅಕಾಲಿಕ ಮಳೆಯಿಂದ ಕೊಡಗಿನ ರೈತರು ಹಾಗೂ ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದು, ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜ.11 ರಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿದ ಪ್ರಾಕೃತಿಕ ವಿಕೋಪಗಳಿಂದ ಕೊಡಗಿನ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷ ಕೋವಿಡ್ ಪರಿಸ್ಥಿತಿಯಿಂದ ನಷ್ಟ ಎದುರಾಗಿದೆ. 2021ರಲ್ಲಿ ಆಶಾದಾಯಕ ಬೆಳವಣಿಗೆಗಳು ಇರಬಹುದೆಂದು ಭಾವಿಸಲಾಗಿತ್ತಾದರೂ, ಆರಂಭದಲ್ಲೇ ಅಕಾಲಿಕ ಮಳೆ ಸುರಿದು ಕಾಫಿ, ಭತ್ತ, ಏಲಕ್ಕಿ, ಅಡಿಕೆ ಸಂಪೂರ್ಣ ನಾಶವಾಗಿದೆ. ಗಿಡದಲ್ಲಿರುವ ಕಾಫಿ ಕೊಳೆಯುತ್ತಿದ್ದರೆ, ಒಣಗಲು ಹಾಕಿದ ಫಸಲು ಅತಿಯಾದ ಮಳೆಗೆ ಕೊಚ್ಚಿ ಹೋಗಿದೆ. ಕೊಯ್ಲಿಗೆ ಬಂದಿದ್ದ ಭತ್ತ ನೀರು ಪಾಲಾಗಿದೆ ಎಂದರು.

ಇಷ್ಟೆಲ್ಲ ಕಷ್ಟ ನಷ್ಟಗಳ ನಡುವೆ ಜಿಲ್ಲೆಯ ಕೃಷಿಕ ವರ್ಗ ಬವಣೆ ಅನುಭವಿಸುತ್ತಿದ್ದರೂ, ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗೂ ಶಾಸಕರು ಯಾವುದೇ ಪರಿಹಾರೋಪಾಯಗಳನ್ನು ಸೂಚಿಸುತ್ತಿಲ್ಲ. ಜಿಲ್ಲೆಯ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಚುನಾವಣೆ ಸಂದರ್ಭ ಮಾತ್ರ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಮಂಜುನಾಥ್ ಕುಮಾರ್ ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss