Tuesday, June 28, 2022

Latest Posts

ಕೊಡಗು| ಆತಿಥ್ಯಕ್ಕೆ ತೆರೆದುಕೊಳ್ಳಲಿವೆ ಹೊಟೇಲ್- ರೆಸ್ಟೋರೆಂಟ್‍ಗಳು, ಮಾರ್ಗಸೂಚಿಯಡಿ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಸೂಚನೆ

ಮಡಿಕೇರಿ: ಸರ್ಕಾರದ ಆದೇಶದಂತೆ ಜೂ.8ರಿಂದ ಹೊಟೇಲ್, ರೆಸ್ಟೋರೆಂಟ್ ಮತ್ತು ಆತಿಥ್ಯ ಕೇಂದ್ರಗಳನ್ನು ಮತ್ತು ನೋಂದಾಯಿತ ಹೋಂಸ್ಟೇಗಳನ್ನು ಮಾತ್ರ ಆರಂಭಿಸಲು ಕೊಡಗು ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಈ ಸಂಬಂಧ ಮಾರ್ಗಸೂಚಿಗಳನ್ನೂ ಜಿಲ್ಲಾಡಳಿತ ಪ್ರಕಟಿಸಿದೆ.  ಸಾರ್ವಜನಿಕ ಹಿತಾಸಕ್ತಿಯಿಂದ ಹೊರಡಿಸಲಾದ ಮತ್ತು ಕಾಲ ಕಾಲಕ್ಕೆ ಹೊರಡಿಸಲಾಗುವ ಕಾರ್ಯವಿಧಾನ(S,P)ವನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಆಡಳಿತ ಮಂಡಳಿ, ವ್ಯವಸ್ಥಾಪಕರು, ಮಾಲಕರು ಅಥವಾ ಸಂಬಂಧಪಟ್ಟವರ ವಿರುದ್ಧ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ ಮತ್ತು ಸಂಬಂಧಿತ ಇತರೆ ಕಾಯ್ದೆಗಳಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಎಚ್ಚರಿಸಿದ್ದಾರೆ.
ಕಂಟೈನ್ಮೆಂಟ್ ವಲಯಗಳಲ್ಲಿ ತೆರೆಯಲು ಮತ್ತು ಕಂಟೈನ್‍ಮೆಂಟ್ ವಲಯದವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ನೋಂದಾಯಿತ ಹೋಂಸ್ಟೇಗಳಿಗೆ ಮಾತ್ರ ಅವಕಾಶ: ಜಿಲ್ಲೆಯಲ್ಲಿ ಹಲವು ಹೋಂ-ಸ್ಟೇಗಳು ಇದ್ದು, ಇವುಗಳ ಪೈಕಿ ಪ್ರವಾಸೋದ್ಯಮ ಇಲಾಖೆಯಡಿ ನೋಂದಾಯಿಸಲ್ಪಟ್ಟ ಅನುಮತಿ, ಪರವಾನಗಿ ಪತ್ರ ಹೊಂದಿರುವ ಹೋಂ-ಸ್ಟೇ ಗಳು ಮಾತ್ರ ಕಾರ್ಯಾಚರಿಸಲು ಅವಕಾಶವಿರುತ್ತದೆ. ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಪರ್ಕ ತಡೆ ಅವಧಿ ಹೆಚ್ಚಳ: ಸರ್ಕಾರದ ಇತ್ತೀಚಿನ ಆದೇಶದಂತೆ ವಿದೇಶದಿಂದ ಆಗಮಿಸಿದವರಿಗೆ 28 ದಿನಗಳ ಮತ್ತು ಹೊರ ರಾಜ್ಯದಿಂದ ಆಗಮಿಸಿದವರಿಗೆ 21 ದಿನಗಳ ಸಾಂಸ್ಥಿಕ ಹಾಗೂ ಗೃಹ ಸಂಪರ್ಕ ತಡೆ ಕಡ್ಡಾಯವಾಗಿರುತ್ತದೆ. ಆದ್ದರಿಂದ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವವರೆಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಆಗಮಿತರು ಕ್ವಾರಂಟೈನ್ ಅವಧಿಯಲ್ಲಿರುವ ಬಗ್ಗೆ ಕೈಗೆ ಮೊಹರು ಹಚ್ಚಿದ್ದಲ್ಲಿ, ಅವರಿಗೆ ಕಡ್ಡಾಯವಾಗಿ ಪ್ರವೇಶ ನಿರ್ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಆರೋಗ್ಯವಂತರಿಗೆ ಮಾತ್ರ ಅವಕಾಶ: ತುರ್ತು, ಅನಿವಾರ್ಯ ಮತ್ತು ವೈದ್ಯಕೀಯ ಹಿನ್ನಲೆ ಇದ್ದಲ್ಲಿ ಮಾತ್ರ 65 ವರ್ಷ ಮೇಲ್ಪಟ್ಟವರು, ಸಹ ಅಸ್ವಸ್ಥತೆ ಉಳ್ಳವರು, ಗರ್ಭಿಣಿ ಮಹಿಳೆಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶವಿರುತ್ತದೆ. ಈ ರೀತಿಯಾಗಿ ಆಗಮಿಸಿದಲ್ಲಿ ಅವರುಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಆಗಮನ ಮತ್ತು ನಿರ್ಗಮನ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಇರಿಸಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಆರೋಗ್ಯವಂತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಾಮಾಜಿಕ ಅಂತರ-ಮಾಸ್ಕ್ ಕಡ್ಡಾಯ: ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಧರಿಸತಕ್ಕದ್ದು, ಸಾಕಷ್ಟು ಸಾಮಾಜಿಕ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಬೇಕು. ಮರು ಬಳಕೆ ಮಾಡಲಾರದಂತಹ ಮೆನು ಕಾರ್ಡ್‍ಗಳನ್ನು ಬಳಸಬೇಕು. ಬಟ್ಟೆಯಿಂದ ತಯಾರಿಸಿದ ನ್ಯಾಪ್ಕಿನ್ ಬದಲಿಗೆ ಉತ್ತಮ ಗುಣಮಟ್ಟದ ಪೇಪರ್ ನ್ಯಾಪ್ಕಿನ್ ಬಳಸಬೇಕು. ಸಾಧ್ಯವಾದಷ್ಟು ಪಾರ್ಸೆಲ್, ರೂಂ ಸರ್ವಿಸ್, ಹೋಂ ಡೆಲಿವರಿಗೆ ಉತ್ತೇಜನ ನೀಡಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಉಗುಳುವುದು ನಿಷಿದ್ಧ: ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಕೋವಿಡ್-19 ಸಂಬಂಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಆಡಿಯೋ ,ವೀಡಿಯೋ ಮುದ್ರಿಕೆಗಳ ಮೂಲಕ ಆಗಾಗ್ಗೆ ಜಾಗೃತಿ ಮೂಡಿಸುತ್ತಿರಬೇಕು ಮತ್ತು ಭಿತ್ತಿ ಪತ್ರ , ಪೋಸ್ಟರ್ ಹಚ್ಚಬೇಕು. ಒಳಾಂಗಣ, ಹೊರಾಂಗಣ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ಜನ ಒಗ್ಗೂಡದಂತೆ, ಜನ ದಟ್ಟಣೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಅತಿಥಿಗಳ, ಸಿಬ್ಬಂದಿಗಳ ಮತ್ತು ಸಾಮಾಗ್ರಿ ದಾಸ್ತಾನು ಸಂಬಂಧ ಪ್ರತ್ಯೇಕ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ,ವ್ಯವಸ್ಥೆ ಕೈಗೊಳ್ಳಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ದಾಖಲಾತಿ ಕಡ್ಡಾಯ: ಅತಿಥಿಗಳ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಸಂಚಾರದ ಹಿನ್ನೆಲೆ, ಆರೋಗ್ಯ ಸ್ಥಿತಿ ಮುಂತಾದ ವಿವರಗಳೊಂದಿಗೆ ಸ್ವಯಂ ಘೋಷಣೆ ನಮೂನೆಯನ್ನು ರಿಸೆಪ್ಷನ್‍ನಲ್ಲಿ ಭರ್ತಿಗೊಳಿಸಿ ಇರಿಸಿಕೊಳ್ಳಬೇಕು. ಅತಿಥಿಗಳ ಉಪಯೋಗಕ್ಕೆ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ರಿಸೆಪ್ಷನ್‍ನಲ್ಲಿ ಇರಿಸಬೇಕು. ನಮೂನೆ ಭರ್ತಿಗೊಳಿಸುವ ಮೊದಲು ಸ್ಯಾನಿಟೈಸರ್‍ನಿಂದ ಹಸ್ತವನ್ನು ಸ್ಯಾನಿಟೈಸ್ ಮಾಡಬೇಕು. ಸಾಧ್ಯವಾದಷ್ಟು ವಿವಿಧ ಮಾದರಿಯಲ್ಲಿ ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸಬೇಕು. ಲಗ್ಗೇಜ್‍ಗಳನ್ನು ಒಳತರುವ ಮೊದಲು ಸೋಂಕು ನಿವಾರಣೆಗೊಳಿಸಬೇಕು ಎಂದು ತಿಳಿಸಲಾಗಿದೆ.
ನೈರ್ಮಲ್ಯಕ್ಕೆ ಒತ್ತು: ಅಡುಗೆ ಕೊಠಡಿ, ವಿತರಣೆ ಕೌಂಟರ್, ವಿತರಣೆ ವ್ಯವಸ್ಥೆಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಬೇಕು. ಅತಿಥಿಗಳ ಮತ್ತು ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್/ಮುಖಗವಸು, ಗ್ಲೌವ್ಸ್ ಇತ್ಯಾದಿಗಳು ಸ್ಥಳದಲ್ಲೇ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಮಕ್ಕಳ ಆಟಿಕೆ ಮತ್ತು ಆಟದ ಸ್ಥಳಗಳನ್ನು ಬಳಸುವಂತಿಲ್ಲ. ನಿಯಮಿತ ಅವಧಿಗೆ ಸರಿಯಾಗಿ ಪರಿಣಾಮಕಾರಿಯಾಗಿ ಅಡುಗೆ ಕೊಠಡಿ, ಹಾಲ್, ಟೇಬಲ್, ಅಸನ, ಕೈ ತೊಳೆಯುವ ಸ್ಥಳ, ಶೌಚಾಲಯ ಇತ್ಯಾದಿಗಳನ್ನು ಶುಚಿಗೊಳಿಸಿ ಸೋಂಕು ನಿವಾರಣೆ ಮಾಡಬೇಕು ಎಂದು ಸಲಹೆ ಮಾಡಲಾಗಿದೆ.
ಸೋಂಕು ನಿವಾರಕ ಬಳಸಿ: ಸಾಮಾನ್ಯವಾಗಿ ಸಂಪರ್ಕಕ್ಕೆ ಬರುವ ಸ್ಥಳಗಳಾದ ಬಾಗಿಲು ಹಿಡಿ, ಲಿಫ್ಟ್‍ನ ಬಟನ್‍ಗಳು, ಹ್ಯಾಂಟ್ ರೈಲ್, ಬೆಂಚ್‍ಗಳು, ವಾಶ್ ರೂಂ ಮುಂತಾದವುಗಳನ್ನು ಆಗಾಗ್ಗೆ ನಿಯಮಿತ ಅವಧಿಗೆ ಸರಿಯಾಗಿ 1% ಸೋಡಿಯಂ ಹೈಪೋಕ್ಲೋರೈಡ್ ಮಿಶ್ರಣದಿಂದ ಸೋಂಕು ನಿವಾರಣೆಗೊಳಿಸಬೇಕು. ಅತಿಥಿಗಳು ಮತ್ತು ಸಿಬ್ಬಂದಿಗಳು ಬಳಸಿದ ಮಾಸ್ಕ್ / ಮುಖಗವಸು / ಕರವಸ್ತ್ರ ಇತ್ಯಾದಿಗಳು ಇದ್ದಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿಗೊಳಿಸಬೇಕು. ಪ್ರತಿ ಬಾರಿ ಅತಿಥಿಗಳು ನಿರ್ಗಮಿಸಿದ ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ರೂಂ ಸರ್ವಿಸ್ ನೀಡುವಾಗ ಪದಾರ್ಥಗಳನ್ನು ನೇರವಾಗಿ ಹಸ್ತಾಂತರಿಸದೆ ಕೊಠಡಿ, ಬಾಗಿಲ ಬಳಿ ಇರಿಸಬೇಕು ಎಂದು ತಿಳಿಸಲಾಗಿದೆ.
ಅಸ್ವಸ್ಥರಿಗೆ ಪ್ರತ್ಯೇಕ ಕೊಠಡಿ: ಅಸ್ವಸ್ಥತೆ ಇರುವವರು ಕಂಡು ಬಂದಲ್ಲಿ ಅವರನ್ನು ಇತರರಿಂದ ಪ್ರತ್ಯೇಕಿಸಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು ಮತ್ತು ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಬೇಕು. ಆಗಮಿಸಿದ ವ್ಯಕ್ತಿಗಳಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಲ್ಲಿ ಆ ಕಟ್ಟಡದ ಸಿಬ್ಬಂದಿಗಳು ಸೇರಿದಂತೆ ಪೂರ್ಣ ಕಟ್ಟಡವನ್ನು ಕಂಟೈನ್‍ಮೆಂಟ್ ವಲಯವನ್ನಾಗಿ ಮಾಡಲಾಗುವುದು ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು, ಯಾವುದೇ ವಿಚಾರಗಳಿದ್ದಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ರೂಂ 1077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದೆಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss