ಹೊಸದಿಗಂತ ವರದಿ, ಕೊಡಗು
ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಡಿ.27ರಂದು ವೀರಾಜಪೇಟೆ ತಾಲೂಕಿನಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಎರಡನೇ ಹಂತದಲ್ಲಿ ವೀರಾಜಪೇಟೆ ತಾಲೂಕಿನ ಒಟ್ಟು 38 ಗ್ರಾ.ಪಂ.ಗಳ ಪೈಕಿ 35 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯಲಿದೆ. ವೀರಾಜಪೇಟೆ ತಾಲೂಕಿನ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 136 ಕ್ಷೇತ್ರಗಳ 366 ಸ್ಥಾನಗಳಿಗೆ 183 ಮತಗಟ್ಟೆಗಳಲ್ಲಿ ಡಿ 27ರ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. 924 ಮಂದಿ ಸ್ಪರ್ಧಾ ಕಣದಲ್ಲಿದ್ದು, 54 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾ.ಪಂ.ವ್ಯಾಪ್ತಿಯ ಅರಕೆರೆ 1,2,3 ಕ್ಷೇತ್ರಗಳ 4 ಸ್ಥಾನಗಳಿಗೆ ಯಾವುದೇ ನಾಮಪತ್ರ ಸ್ವೀಕೃತವಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ವೀರಾಜಪೇಟೆ ತಾಲೂಕಿನಲ್ಲಿ 50 ಸೂಕ್ಷ್ಮ, 18 ಅತಿ ಸೂಕ್ಷ್ಮ, 4 ನಕ್ಸಲ್ ಮತ್ತು 111 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಹಾಗೆಯೇ ಚುನಾವಣಾ ಕರ್ತವ್ಯಕ್ಕೆ 54 ಬಸ್ಸು, 24 ಮ್ಯಾಕ್ಸಿಕ್ಯಾಬ್, 29 ಜೀಪು
ಸೇರಿದಂತೆ ಒಟ್ಟು 107 ವಾಹನಗಳನ್ನು ನಿಯೋಜಿಸಲಾಗಿದೆ.
ಜಾತ್ರೆ- ಸಂತೆ ರದ್ದು:ವೀರಾಜಪೇಟೆ ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿ. 26 ರ ಮಧ್ಯರಾತ್ರಿ 12 ಗಂಟೆಯಿಂದ 27 ರ ಮಧ್ಯರಾತ್ರಿ 12 ಗಂಟೆಯ ವರೆಗೆ ಎಲ್ಲಾ ವಿಧದ ಸಂತೆ, ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಮದ್ಯ ಮಾರಾಟ ನಿಷೇಧ: ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾ.ಪಂ.ವ್ಯಾಪ್ತಿಯಲ್ಲಿ ಡಿ. 25 ರ ಸಂಜೆ 5 ಗಂಟೆಯಿಂದ 27 ರ ಸಂಜೆ 5 ಗಂಟೆಯವರೆಗೆ ಎಲ್ಲಾ ವಿಧದ ಮದ್ಯಗಳ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ನಿಷೇಧಾಜ್ಞೆ ಜಾರಿ:ವೀರಾಜಪೇಟೆ ತಾಲೂಕಿನಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದ್ದು, ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಪ್ರತಿಯೊಂದು ಮತಗಟ್ಟೆಗೂ ಒಬ್ಬ ಅಧ್ಯಕ್ಷ ಅಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ವೀರಾಜಪೇಟೆ ತಾಲೂಕಿಗೆ 220 ಪಿಆರ್ಒ, 220 ಎಪಿಆರ್ಒ ಮತ್ತು 440 ಪೋಲಿಂಗ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಮಾನವ-ವನ್ಯ ಪ್ರಾಣಿ ಸಂಘರ್ಷ ಇರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಒಟ್ಟು 128 ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.