ಕೊಡಗು| ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 10 ಲಕ್ಷ ಮನೆಗಳ ನಿರ್ಮಾಣ: ಸಚಿವ ವಿ.ಸೋಮಣ್ಣ

0
57

ಮಡಿಕೇರಿ : ರಾಜ್ಯ ಸರಕಾರ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ೧೦ ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಮುಂಗಾರು ಎದುರಿಸುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಶುಕ್ರವಾರ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ೨೪ ತಿಂಗಳುಗಳಲ್ಲಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ೪.೫೦ ಲಕ್ಷ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೫.೫೦ ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು ಎಂದು ನುಡಿದರು.
ಕೊಡಗಿನ ಜಂಬೂರು ಮತ್ತು ಮದೆನಾಡು ಬಳಿ ಸಂತ್ರಸ್ತರಿಗೆ ನಿರ್ಮಿಸಲಾಗುತ್ತಿರುವ ಮನೆಗಳು ಪೂರ್ಣಗೊಂಡಿವೆ. ಹಾಗೆಯೇ ಗಾಳಿಬೀಡು ಮತ್ತು ಬಿಳಿಗೇರಿಯಲ್ಲಿ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಮನೆಗಳನ್ನು ಮೂರು-ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದನ್ನು ಅನುಷ್ಠಾನಗೊಳಿಸಲಾಗುವುದು. ಸಂಕಷ್ಟದಲ್ಲಿರುವ ಎಲ್ಲರಿಗೂ ಸರ್ಕಾರ ಸ್ಪಂದಿಸಲಿದೆ ಎಂದು ವಿ.ಸೋಮಣ್ಣ ನುಡಿದರು.
ಮನೆ ಹಸ್ತಾಂತರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಬೇಕೆಂಬ ಬೇಡಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರೊಟೋಕಾಲ್ ಹೇಗಿದೆಯೋ ಹಾಗೆ ಮಾಡಲಾಗುವುದು ಎಂದಷ್ಟೇ ತಿಳಿಸಿದರು. ಯಾರ‍್ಯಾರು ಏನೇನು ಟ್ವೀಟ್ ಮಾಡಿದ್ದಾರೆ ಎಂಬುದನ್ನು ನಾನೂ ನೋಡಿದ್ದೆನೆ. ಹಲವು ವರ್ಷಗಳ ಅನುಭವ ನನಗೂ ಇದೆ. ಜನ ಕೊಟ್ಟ ಹಣದಲ್ಲಿ ಮನೆ ನಿರ್ಮಿಸಲಾಗಿದ್ದು, ಯಾರೂ ಕೈಯಿಂದ ದುಡ್ಡು ಹಾಕಿ ಮನೆ ನಿರ್ಮಿಸಿಕೊಟ್ಟಿಲ್ಲ. ಪರಿಸ್ಥಿತಿಗೆ ತಕ್ಕಂತೆ ಅಧಿಕಾರದಲ್ಲಿದ್ದವರು ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಕುಮಾರಸ್ವಾಮಿ ಅವರ ಸಂತ್ರಸ್ತರಿಗೆ ಮನೆ ಹಸ್ತಾಂತರವಾಗುತ್ತಿರೋದು ಸಂತಸದ ವಿಚಾರ. ನಮ್ಮ ಕೆಲಸ ಮಾತನಾಡುತ್ತಿವೆ ಎಂಬ ಟ್ವೀಟ್‌ಗೆ ಸಚಿವರು ಟಾಂಗ್ ನೀಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಜರಿದ್ದರು.

LEAVE A REPLY

Please enter your comment!
Please enter your name here