Sunday, August 14, 2022

Latest Posts

ಕೊಡಗು| ಕೊರೋನಾ ವಾರಿಯರ್ಸ್‌ಗೂ ಸಂಪರ್ಕ ತಡೆ!

ಕೊಡಗು: ಮುಂಬೈನಿಂದ ಕೊಡಗಿಗೆ ಆಗಮಿಸಿದ ಮಹಿಳೆಯೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿದ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 22 ಮಂದಿ ಸಿಬ್ಬಂದಿಗಳಿಗೆ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಿಸಲಾಗಿದ್ದು, ಇವರ ಸಂಪರ್ಕದಲ್ಲಿದ್ದ 35ಮಂದಿ ಸಂಬಂಧಿಕರಿಗೂ ಗೃಹ ಸಂಪರ್ಕ ತಡೆಯಲ್ಲಿರುವಂತೆ ಸೂಚಿಸಿಲಾಗಿದೆ.

ಆರೋಗ್ಯ ಇಲಾಖೆಯ ಮೂಲಗಳು ಈ ವಿಷಯವನ್ನು ದೃಢಪಡಿಸಿದ್ದು, ಇದೀಗ ಅಂದು ಕರ್ತವ್ಯದಲ್ಲಿದ್ದ ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಇತರರಿಗೂ ಆತಂಕ ಕಾಡತೊಡಗಿದೆ.

ಮಡಿಕೇರಿ ತಾಲೂಕಿನ ಮಹಿಳೆಯೊಬ್ಬರು ಮೇ 16ರಂದು ಮುಂಬೈನಿಂದ ತವರಿಗೆ ಹಿಂದಿರುಗುವಾಗ ಸಂಪಾಜೆಯಲ್ಲಿ ತಪಾಸಣೆ ನಡೆಸಿದಾಗ ಅವರ ದೇಹದ ಉಷ್ಣಾಂಶ ಅಧಿಕವಿದ್ದ ಕಾರಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿತ್ತು. ಆಕೆಯ ಗಂಟಲ ದ್ರವ ಪರೀಕ್ಷೆ ವರದಿ 18ರಂದು ಬಂದಾಗ ಆ ಮಹಿಳೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಮೇ 16ರಂದು ಕರ್ತವ್ಯನಿರತರಾಗಿದ್ದು, ಈ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ 22 ಮಂದಿ ಕೊರೋನಾ ವಾರಿಯರ್ಸ್‌ಗಳನ್ನು ಇದೀಗ 14 ದಿನಗಳ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಿಸಲಾಗಿದೆ. ಅಲ್ಲದೆ ಈ 22 ಮಂದಿ ಸರಕಾರಿ ಉದ್ಯೋಗಿಗಳ ಸಂಪರ್ಕದಲ್ಲಿದ್ದ ಇತರ 35 ಮಂದಿ ಸಂಬಂಧಿಕರನ್ನು ಅವರವರ ಮನೆಗಳಲ್ಲೇ ಇದ್ದು, ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ವೈದ್ಯಾಧಿಕಾರಿಗಳು ನಿರ್ದೇಶಿಸಿರುವುದಾಗಿ ಹೇಳಲಾಗಿದೆ.

ಹೀಗಾಗಿ ಮೇ 16 ರಂದು ಸಂಪಾಜೆಯ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯನಿರತ ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಇತರ ಉದ್ಯೋಗಿಗಳಲ್ಲಿ ಇದೀಗ ಆತಂಕ ಎದುರಾಗಿದೆ. ಸಾಂಸ್ಥಿಕ ಸಂಪರ್ಕ ತಡೆಯಲ್ಲಿರುವ ಸಂಪಾಜೆ ಕೇಂದ್ರದ 22ಮಂದಿ ಕೊರೊನಾ ವಾರಿಯರ್ಸ್‌ಗಳ ಗಂಟಲು ದ್ರವವನ್ನು ಸಂಗ್ರಹಿಸಿ ವೈದ್ಯಕೀಯ ತಪಾಸಣೆಗಾಗಿ ಕಳುಹಿಸಿಕೊಡಲಾಗಿದ್ದು, ವರದಿ ಬಂದ ಬಳಿಕವಷ್ಟೇ ಅವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬೇಕಿದೆ.

ಈ 22 ಮಂದಿಯ ವರದಿ ಬಂದ ಬಳಿಕವಷ್ಟೇ ಇವರ ಸಂಪರ್ಕದಲ್ಲಿದ್ದರೆನ್ನಲಾದ ಇತರ 35 ಮಂದಿಯ ಆರೋಗ್ಯದ ಬಗ್ಗೆ ದೃಢಪಡಬೇಕಿದೆ.
ಈ ನಡುವೆ ಮುಂಬೈನಿಂದ ವಾಪಸ್ಸಾಗಿರುವ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss