Thursday, August 18, 2022

Latest Posts

ಕೊಡಗು| ಕೊರೋನಾ ವಾರಿಯರ್ಸ್ ‌ಗೂ ಬಂತು ಸಂಕಷ್ಟ 20 KSRP ಸಿಬ್ಬಂದಿಗಳಿಗೆ ಸಂಪರ್ಕ ತಡೆ

ಕೊಡಗು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆಗಾಗಿ ಕೊಡಗಿಗೆ ಆಗಮಿಸಿದ್ದ 20 ಮಂದಿ ಕೆಎಸ್‌ಆರ್‌ಪಿ ಸಿಬ್ಬಂದಿಗಳಿಗೆ ಕೋರೋನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಸಾಂಸ್ಥಿಕ ಸಂಪರ್ಕ ತಡೆಗೆ ಒಳಪಡಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗಾಗಿ ಹಾಸನದಿಂದ ರಾಜ್ಯದ ರಾಜಧಾನಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿಂದ ಹಾಸನಕ್ಕೆ ಆಗಮಿಸಿದ ಈ ತಂಡದಲ್ಲಿ ಕರ್ತವ್ಯ ನಿರತರಾಗಿದ್ದ ನಾಲ್ವರು ಸಿಬ್ಬಂದಿಗಳ ಸಹಿತ 20 ಮಂದಿಯ ತಂಡವನ್ನು ರಂಜಾನ್‌ನ ಭದ್ರತಾ ವ್ಯವಸ್ಥೆಗಾಗಿ ಮಡಿಕೇರಿಗೆ ಕಳುಹಿಸಿಕೊಡಲಾಗಿತ್ತು.

ಅಷ್ಟರೊಳಗೆ ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ತೆರಳಿದ್ದ ಓರ್ವ ಸಿಬ್ಬಂದಿಯ ಆರೋಗ್ಯ ತಪಾಸಣಾ ವರದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಕೊಡಗಿಗೆ ಆಗಮಿಸಿರುವ ತಂಡದಲ್ಲಿ ಆ ಸಿಬ್ಬಂದಿಯ ಸಂಪರ್ಕ ಹೊಂದಿದ್ದ ನಾಲ್ವರು ಇರುವ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿ ಕರ್ತವ್ಯಕ್ಕೆ ಆಗಮಿಸಿರುವ ಹಾಸನದ ಎಲ್ಲಾ 20 ಮಂದಿಯನ್ನು ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಕ್ಕೆ ಸೇರಿಸಲಾಗಿದೆ.

ಈ ಇಪ್ಪತ್ತು ಮಂದಿಯ ಗಂಟಲು ದ್ರವವನ್ನು ಇನ್ನಷ್ಟೇ ಪರೀಕ್ಷೆಗೆ ಒಳಪಡಿಸಬೇಕಿದ್ದು, ವರದಿ ಬಂದ ಬಳಿಕವಷ್ಟೇ ಇವರಲ್ಲಿ ಕೊರೋನಾ ಸೋಂಕಿನ ಬಗ್ಗೆ ಖಾತರಿಯಾಗಬೇಕಿದೆ.

22 ಮಂದಿಗೆ ನಿರಾತಂಕ- ಮೂವರಿಗೆ ಸಂಕಷ್ಟ: ಈ ನಡುವೆ ಮೇ 16 ರಂದು ಮುಂಬೈನಿಂದ ಮಡಿಕೇರಿಗೆ ಆಗಮಿಸಿರುವ ಮಹಿಳೆಯೊಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ಸಂಪಾಜೆ ಗೇಟ್‌ನಲ್ಲಿ ಕರ್ತವ್ಯ ನಿರತ 22 ಮಂದಿ ಕೊರೋನಾ ವಾರಿಯರ್ಸ್ ಇದೀಗ ನಿರಾಳರಾಗಿದ್ದಾರೆ.

ಮುಂಬೈನಿಂದ ತವರಿಗೆ ಬಂದಿರುವ ಮಹಿಳೆಗೆ ಕೊರೋನಾ ದೃಢಪಟ್ಟಿದ್ದರಿಂದ, ಸಂಪಾಜೆಯಲ್ಲಿ ಕರ್ತವ್ಯನಿರತ ಪೊಲೀಸರು, ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಸಹಿತ 22ಮಂದಿಗೆ ಮೇ 18ರಿಂದ ಸಾಂಸ್ಥಿಕ ಸಂಪರ್ಕ ತಡೆ ವಿಧಿಸಲಾಗಿತ್ತು.

ಇದೀಗ ಈ ಮಂದಿಯ ತಪಾಸಣಾ ವರದಿಯು ಪ್ರಯೋಗಾಲಯದಿಂದ ಬಂದಿದ್ದು, ನೆಗೆಟಿವ್ ಇರುವುದಾಗಿ ಮಾಹಿತಿ ಲಭಿಸಿದೆ. ಆದರೂ ಈ ಎಲ್ಲಾ 22 ಮಂದಿಯನ್ನು ಸಾಂಸ್ಥಿಕ ಸಂಪರ್ಕ ತಡೆಯನ್ನು 14 ದಿನ ಪೂರ್ಣಗೊಳ್ಳುವವರೆಗೂ ಮುಂದುವರಿಸಲಿರುವುದಾಗಿ ಹೇಳಲಾಗಿದೆ.

ಈ ನಡುವೆ ಮೇ 29 ರಂದು ಸಂಪಾಜೆ ಮೂಲಕ ಆಗಮಿಸಿರುವ ನಾಲ್ವರ ಪೈಕಿ ಒಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಪಾಜೆಯಲ್ಲಿ ಅಂದು ಕರ್ತವ್ಯದಲ್ಲಿದ್ದ ಮೂವರು ಕೊರೋನಾ ವಾರಿಯರ್ಸ್ ‌ಗೆ ಸಾಂಸ್ಥಿಕ ಸಂಪರ್ಕ ತಡೆ ವಿಧಿಸಿರುವುದಾಗಿ ಜಿಲ್ಲಾಡಳಿತದ ಮೂಲಗಳು ಹೇಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!