ಮಡಿಕೇರಿ: ಕೊರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡ ಹಾಗೂ ನಗರ ಆರಕ್ಷಕ ತಂಡಕ್ಕೆ ವೀರಾಜಪೇಟೆಯ ಸಮಾಜ ಸೇವಾ ಸಂಸ್ಥೆಯಾದ ಹೋಪ್ ಟ್ರಸ್ಟ್ ವತಿಯಿಂದ ಆಸ್ಪತ್ರೆಯ ಸಭಾಂಗಣದಲ್ಲಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅತಿಥಿಯಾಗಿ ಆಗಮಿಸಿದ ನಗರ ಪೊಲೀಸ್ ಠಾಣಾಧಿಕಾರಿ ಹೆಚ್. ಮರಿಸ್ವಾಮಿ ಮಾತನಾಡಿ, ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ತಂಡ ಕೊರೋನಾ ವೈರಸ್ಗೆ ಸಂಬಂಧಿಸಿದಂತೆ ವಿವಿಧೆಡೆಗಳಿಂದ ಆಗಮಿಸುವವರನ್ನು ಯಾವುದೇ ಸಮಯದಲ್ಲೂ ಸ್ಪಂದಿಸುತ್ತಿದ್ದರು. ಕೊರೋನಾ ವಿರುದ್ಧದ ಹೋರಾಟಕ್ಕೆ ಆರೋಗ್ಯ ತಂಡವೇ ಮುನ್ನೆಚ್ಚರಿಕೆಯ ಸೇವೆಗಾಗಿ ಸಿದ್ಧತೆಯನ್ನು ಮಾಡಿಕೊಂಡಿರುವುದರಿಂದ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಈ ತಂಡವನ್ನು ಸನ್ಮಾನಿಸುವ ಹೋಪ್ ಟ್ರಸ್ಟ್ನ ಸೇವೆ ಸ್ತುತ್ಯರ್ಹವಾದುದು ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಮಸ್ಜಿದ್-ಎ-ಅಝಂ ಅಧ್ಯಕ್ಷ ಎಸ್.ವೈ.ನಿಸಾರ್ ಅಹಮದ್, ಸುಂಟಿಕೊಪ್ಪದ ಸಮಾಜ ಸೇವಕ ನಿಯಾಝ್ ಹಿತನುಡಿಗಳನ್ನಾಡಿದರು. ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಸಿಂಪಿ, ಡಾ. ಅನಿಲ್ ಧವನ್, ಡಾ. ಶ್ರೀನಿವಾಸ್ ಮೂರ್ತಿ, ಡಾ. ಗಿರಿಧರ್, ಡಾ. ಆನಂದ್, ಡಾ.ಹೇಮಾಪ್ರಿಯ, ಡಾ. ರೇಣುಕಾ, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಹೋಪ್ ಟ್ರಸ್ಟ್ ಸಂಘಟನೆಯ ಅಧ್ಯಕ್ಷ ಇಸ್ಮಾಯೀಲ್ ಶರೀಫ್ (ಅಖೀಲ್), ಡಿ.ಐ.ಎಜಾಜ್ ಅಹಮ್ಮದ್, ಖಾಝಿಂ, ಇಮ್ತಿಯಾಜ್, ಸಿ.ಎ.ರಾಜಿಕ್ ಮತ್ತಿತರರು ಹಾಜರಿದ್ದರು. ಸಂಘಟನೆಯ ಆಸಿಫ್ ಕಾರ್ಯಕ್ರಮ ನಿರೂಪಿಸಿದರು.