ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ೧.೦೬ ಕೋಟಿ ರೂ. ವೆಚ್ಚದಲ್ಲಿ ಸಜ್ಜುಗೊಂಡಿರುವ ಕೊರೋನಾ ಸಾಂಕ್ರಾಮಿಕ ರೋಗ ಸೇರಿದಂತೆ ವೈರಾಣುಗಳಿಂದ ಹರಡುವ ರೋಗಗಳನ್ನು ಪರೀಕ್ಷಿಸುವ ಪ್ರಯೋಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಉಪಸ್ಥಿತಿಯಲ್ಲಿ ನಗರದ ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್ ಚಾಲನೆ ನೀಡಿದರು.
ಕೊರೋನಾ ಸಾಂಕ್ರಾಮಿಕ ತಡೆಯ ನಿಟ್ಟಿನಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಆರೋಗ್ಯ ತಪಾಸಣೆ ನಡೆಸುವ ಅಗತ್ಯತೆ ಇರುವ ಹಿನ್ನೆಲೆಯಲ್ಲಿ, ವಿಪತ್ತು ಪರಿಹಾರ ನಿಧಿಯಡಿ ಪ್ರಯೋಗಾಲಯವನ್ನು ಕೋವಿಡ್ ಆಸ್ಪತೆಯಲ್ಲಿ ಸ್ಥಾಪಿಸಲಾಗಿದೆ. ನೂತನ ಪ್ರಯೋಗಾಲಯದಲ್ಲಿ ಒಂದು ಬಾರಿಗೆ ೧೦೦ ಮಂದಿಯ ಮೂಗು-ಗಂಟಲಿನ ದ್ರವ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ.
ಈ ಹಿಂದೆ ಶಂಕಿತ ರೋಗಿಯ ಗಂಟಲ ದ್ರವ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು, ಪರೀಕ್ಷಾ ವರದಿಗೆ ಕಾಯಬೇಕಾಗುತ್ತಿತ್ತು. ಇದೀಗ ಇಲ್ಲಿಯೇ ಪ್ರಯೋಗಾಲಯ ಸಜ್ಜುಗೊಂಡಿದ್ದು, ಪರೀಕ್ಷಾ ವರದಿ ಕ್ಷಿಪ್ರಗತಿಯಲ್ಲಿ ದೊರಕುವುದರಿಂದ ಅಗತ್ಯ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾರ್ಯಪ್ಪ ಮಾಹಿತಿ ನೀಡಿದರು.
ಮುಂದಿನ ಒಂದು ವಾರದಲ್ಲಿ ಪೂರ್ಣ ಪ್ರಮಾಣದ ಪರೀಕ್ಷೆಯು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯದಲ್ಲಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Iಅಒಖ) ಯಿಂದ ಅನುಮತಿ ಪಡೆದು ಈ ಪ್ರಯೋಗಾಲಯವನ್ನು ಇತರೆ ವೈರಾಣುಗಳಿಂದ ಹರಡುವ ರೋಗಗಳ ಪರೀಕ್ಷೆಗೂ ಬಳಸಬಹುದಾಗಿದೆ ಎಂದು ಸಂಸ್ಥೆಯ ಸಿಬ್ಬಂದಿಗಳು ಸಚಿವರಿಗೆ ಮಾಹಿತಿ ನೀಡಿದರು.
ಪ್ರಯೋಗಾಲಯ ಉದ್ಘಾಟನೆಯ ಸಂದರ್ಭ ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೊಡಗು ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಲೋಕೇಶ್ ಮತ್ತಿತರರು ಇದ್ದರು.