ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಮೊದಲನೇ ಹಂತದಲ್ಲಿ ಡಿ. 22 ರಂದು ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಮತದಾನ ನಡೆಯಲಿದ್ದು, ಕೋವಿಡ್-19 ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಎಸ್ಒಪಿ ನೀಡಿದೆ.
ಎಸ್ಒಪಿಯಂತೆ ಕೋವಿಡ್-19 ಸೋಂಕಿತರು ಹಾಗೂ ಮತದಾನದ ದಿನ ತಪಾಸಣೆಯಿಂದ ಕಂಡು ಬಂದ ಕೋವಿಡ್ ಶಂಕಿತರು ಮತಗಟ್ಟೆಗಳಿಗೆ ತೆರಳಿ ಖುದ್ದು ಮತದಾನ ಮಾಡಲು ಇಚ್ಛಿಸಿದಲ್ಲಿ ಇವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೋಂ ಐಸೋಲೇಷನ್ನಲ್ಲಿರುವ ಕೋವಿಡ್-19 ಸೋಂಕಿತರು ಡಿ. 20 ರ ಸಂಜೆ 5 ಗಂಟೆಯೊಳಗೆ ಅವರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಿದ್ದು, ಸಿಸಿಸಿ/ಕೋವಿಡ್ ಆಸ್ಪತ್ರೆಯಲ್ಲಿರುವ ಕೋವಿಡ್-19 ಸೋಂಕಿತರು ಆರೋಗ್ಯಾಧಿಕಾರಿಗಳಿಗೆ ಡಿ. 20ರ ಸಂಜೆ 5 ಗಂಟೆಯೊಳಗೆ ಮಾಹಿತಿ ನೀಡಬೇಕು.
ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರನ್ನು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಂಬಂಧಪಟ್ಟ ಮತಗಟ್ಟೆಗಳಿಗೆ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕರೆತಂದು ಮತದಾನದ ನಂತರ ಅವರನ್ನು ಸ್ವಸ್ಥಾನಕ್ಕೆ ಮರಳಿ ಕರೆದೊಯ್ಯಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರತಿ ಮತದಾನ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಮತದಾನ ಕೊಠಡಿಗೆ, ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ವ್ಯಕ್ತಿಗಳನ್ನು ಪ್ರವೇಶ ದ್ವಾರದಲ್ಲಿ ಕೋವಿಡ್-19 ಥರ್ಮಲ್ ಜ್ವರ ತಪಾಸಣೆ ಮಾಡಲಾಗುವುದು ಹಾಗೂ ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ್ ಧರಿಸಿರುವುದನ್ನು ಹಾಗೂ ಪ್ರತಿಯೊಬ್ಬರೂ ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.
ಕೋವಿಡ್-19 ಲಕ್ಷಣಗಳು ಕಂಡುಬಂದ ವ್ಯಕ್ತಿಗಳನ್ನು ಕೂಡಲೇ ಪ್ರತ್ಯೇಕಿಸಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡುವ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯಿಂದ ಮಾಡಲಾಗುವುದು. ಮತದಾನಕ್ಕೆ ನಿಗದಿಪಡಿಸಿದ ಕೊಠಡಿಯನ್ನು ಮತ್ತು ಮಸ್ಟರಿಂಗ್, ಡಿಮಸ್ಟರಿಂಗ್, ತರಬೇತಿ ಕೇಂದ್ರ ಹಾಗೂ ಎಣಿಕೆ ಕೇಂದ್ರಗಳನ್ನು ಶೇ.1 ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಿ ಸಿದ್ಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.