Monday, August 15, 2022

Latest Posts

ಕೊಡಗು| ಗೋರಕ್ಷಕರ ವಿರುದ್ಧದ ಪ್ರಕರಣ ಕೈಬಿಡಿ: ಮುಖ್ಯಮಂತ್ರಿ-ಗೃಹಸಚಿವರಿಗೆ ಅಪ್ಪಚ್ಚುರಂಜನ್ ಒತ್ತಾಯ

ಮಡಿಕೇರಿ: ಗೋ ರಕ್ಷಕರ ವಿರುದ್ಧ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವಂತೆ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಸೆಳೆದಿದ್ದಾರೆ. ಅಲ್ಲದೆ ಅಕ್ರಮ ಗೋ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೈವದ ಸ್ಥಾನ ನೀಡಲಾಗಿದ್ದು, ಪೂಜಿಸುವ ಪದ್ಧತಿಯೂ ಇದೆ. ಹೀಗಿದ್ದರೂ, ಅವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ವಧೆ ಮಾಡುವವರ ಸಂಖ್ಯೆ ದಿನೇದಿನೇ ಹಚ್ಚುತ್ತಿದೆ ಎಂದು ಅವರು ಗೃಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ಈ ಅಕ್ರಮ ಗೋ ಸಾಗಾಟ ಮತ್ತು ಗೋವುಗಳನ್ನು ವಧೆ ಮಾಡುವವರ ವಿರುದ್ಧ ಹೋರಾಟ ನಡೆಸಿದ ಗೋ ರಕ್ಷಕರ ವಿರುದ್ಧ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೋ ರಕ್ಷಕರ ವಿರುದ್ಧ ಈ ರೀತಿ ಪ್ರಕರಣಗಳು ದಾಖಲಾಗಿರುವುದು ಖಂಡನೀಯವಾಗಿದ್ದು, ಇಂತಹ ಪ್ರಕರಣಗಳನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಗೋ ಸಾಗಾಣೆ ಮಾಡುವವರ ಮತ್ತು ಗೋ ವಧೆ ಮಾಡುವವರ ವಿರುದ್ಧ ಯಾರೂ ಧ್ವನಿ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಪ್ಪಚ್ಚುರಂಜನ್ ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸರಕಾರ ಈ ಕೂಡಲೇ ಗೋ ರಕ್ಷಕರ ವಿರುದ್ಧ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕೈಬಿಡುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಆದೇಶ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss