Monday, July 4, 2022

Latest Posts

ಕೊಡಗು| ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ: ಎಂ.ಎಸ್. ರಾಮಚಂದ್ರ

ಹೊಸದಿಗಂತ ವರದಿ, ಕೊಡಗು:

ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದಿದರೆ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ, ಕಲಬೆರಿಕೆ ಬಗ್ಗೆ ಎಚ್ಚರವಹಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಎಸ್ ರಾಮಚಂದ್ರ ಅವರು ಸಲಹೆ ಮಾಡಿದ್ದಾರೆ.

ರಾಷ್ಟ್ರೀಯ ಗ್ರಾಹಕರ ದಿನಾಚರಣೆ, ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಹೊಸ ವೈಶಿಷ್ಟ್ಯಗಳು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಕೊಂಡುಕೊಳ್ಳುವ ಮೊದಲು ಪರಿಶೀಲಿಸಬೇಕು. ಹಣ ಕೊಟ್ಟು ವಸ್ತುವನ್ನು ಪಡೆದುಕೊಳ್ಳುವುದರಿಂದಾಗಿ ಆ ವಸ್ತುವಿನ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ ಎಂದು ಅವರು ಹೇಳಿದರು.

ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಎ.ಎ.ಚಂಗಪ್ಪ ಅವರು ಮಾತನಾಡಿ, ಪ್ರತಿ ಬಾರಿಯೂ ವಸ್ತುಗಳನ್ನು ಖರೀದಿಸಲು ಹೋದಾಗ ಎಚ್ಚರಿಕೆಯಿಂದಿರಬೇಕು. ವ್ಯಾಪಾರಿಗಳು ಕೆಲವು ಬಾರಿ ಗ್ರಾಹಕರ ಹಕ್ಕುಗಳನ್ನು ಕಸಿಯಲು ಯತ್ನಿಸುತ್ತಾರೆ. ಕೆಲವರು ತೂಕ ಮತ್ತು ಅಳತೆಯಲ್ಲಿ ವ್ಯಾಪಕ ಮೋಸ ಮಾಡುತ್ತಾರೆ. ಆಹಾರದಲ್ಲೂ ಸಹ ಕಲಬೆರಕೆ ಮಾಡುತ್ತಾರೆ. ಈ ರೀತಿಯ ಸಮಸ್ಯೆಗಳಾದರೆ ಕೂಡಲೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ತಿಳಿಸಿದರು.

ಗ್ರಾಹಕರು ಸುರಕ್ಷತೆ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಕುಂದುಕೊರತೆಗಳನ್ನು ಪರಿಶೀಲಿಸುವುದು, ವಸ್ತುಗಳ ಬಗ್ಗೆ ಆಲಿಸುವುದು, ಗ್ರಾಹಕ ಶಿಕ್ಷಣದ ಬಗ್ಗೆ ಅರಿತುಕೊಳ್ಳಬೇಕಿದೆ ಎಂದು ನುಡಿದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಅಳತೆ, ತೂಕದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಎನ್. ದಿವಾಕರ, ತೂಕ, ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು ಡಿ.ಆರ್., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಕುಮಾರ್ ಮತ್ತಿತರರು ಇದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss