Wednesday, August 10, 2022

Latest Posts

ಕೊಡಗು| ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕಕ್ಕೆ ಸರಕಾರದ ಚಿಂತನೆ ಪ್ರಸ್ತಾವನೆಗೆ: ಗ್ರಾ. ಪಂ.ಹಕ್ಕೊತ್ತಾಯ ಆಂದೋಲನ ಸಮಿತಿ ವಿರೋಧ

ಕೊಡಗು: ರಾಜ್ಯದ ಗ್ರಾಮ ಪಂಚಾಯಿತಿಗಳ ಆಡಳಿತಾವಧಿ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಕೊರೋನಾ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ಅಸಾಧ್ಯವಾಗಿರುವುದರಿಂದ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಸರಕಾರ ಚಿಂತನೆ ನಡೆಸಿದೆ.

ಆದರೆ ಮತ್ತೊಂದೆಡೆ ಪಂಚಾಯಿತಿಗಳ ಅಭಿವೃದ್ಧಿ ದೃಷ್ಟಿಯಿಂದ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದೆ ಈಗಿರುವ ಆಡಳಿತ ಮಂಡಳಿಗಳನ್ನೇ ಮುಂದುವರಿಸಬೇಕು ಇಲ್ಲವೇ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹವೂ ಕೇಳಿ ಬಂದಿದೆ.
ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳ ಪೈಕಿ ಬಹುತೇಕ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಆಳ್ವಿಕೆ ಮೇ ತಿಂಗಳಲ್ಲಿ ಕೊನೆಗೊಂಡಿದ್ದರೆ, ಮತ್ತೆ ಕೆಲವು ಪಂಚಾಯಿತಿಗಳ ಆಡಳಿತಾವಧಿ ಜೂನ್ ತಿಂಗಳಲ್ಲಿ ಮುಗಿಯಲಿದೆ.

ಪ್ರಸಕ್ತ ರಾಜ್ಯಾದ್ಯಂತ ಮಹಾಮಾರಿ ಕೊರೋನಾ ರಣಕೇಕೆ ಹಾಕುತ್ತಿರುವುದರಿಂದ ಈ ಪರಿಸ್ಥಿತಿಯಲ್ಲಿ ಪಂಚಾಯಿಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಸರಕಾರ ಹಾಗೂ ಚುನಾವಣಾ ಆಯೋಗ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಹೀಗಾಗಿ ಮುಂದಿನ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವವರೆಗೆ ಗ್ರಾ.ಪಂ.ಗಳ ಆಡಳಿತವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಸರಕಾರ ಚಿಂತನೆ ನಡೆಸುತ್ತಿದ್ದು, ಈ ಕುರಿತಾದ ಅಧಿಕೃತ ಆದೇಶ ಹೊರಬೀಳುವುದು ಬಾಕಿ ಇದೆ.

ಈ ನಡುವೆ ರಾಜ್ಯದ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾ.ಪಂ ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸದೆ ತಕ್ಷಣ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಮಿತಿ ಒತ್ತಾಯಿಸಿದೆ.

ಮಡಿಕೇರಿಯಲ್ಲಿ ಜಿ.ಪಂ ಉಪ ಕಾರ್ಯದರ್ಶಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿರುವ ಸಮಿತಿಯ ಪ್ರಮುಖರು, ಕೊರೋನಾ ‘ಅಸಾಧಾರಣ ಪರಿಸ್ಥಿತಿ’ಯ ನೆಪವೊಡ್ಡಿ ಸ್ಥಳೀಯ ಸರ್ಕಾರದಂತಿರುವ ಗ್ರಾ.ಪಂ.ಗಳನ್ನು ಅತಂತ್ರಗೊಳಿಸುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ.ಯಾಕುಬ್ ಮಾತನಾಡಿ, ರಾಜ್ಯ ಚುನಾವಣಾ ಆಯೋಗ ಅವಧಿ ಮುಗಿದಿರುವ ಗಾ.ಪಂ ಗಳಿಗೆ ತಕ್ಷಣ ಚುನಾವಣೆ ನಡೆಸುವ ಕಾರ್ಯಕ್ಕೆ ಮುಂದಾಗಬೇಕು. ಅಗತ್ಯವಿರುವ ಸಹಕಾರ ಮತ್ತು ಪೂರಕ ನಿರ್ದೇಶನಗಳನ್ನು ಸರ್ಕಾರ ನೀಡಬೇಕು.ಅಲ್ಲಿಯವರೆಗೆ ಪ್ರಸ್ತುತ ಇರುವ ಸ್ಥಳೀಯ ಗ್ರಾ.ಪಂ ಸರ್ಕಾರವನ್ನೇ ಮುಂದುವರಿಸಬೇಕು. ಚುನಾವಣೆ ನಡೆಸಲು ಅಸಾಧ್ಯವಾದ ಪರಿಸ್ಥಿತಿ ಇರುವಲ್ಲಿ ಮಾತ್ರ ಹಂತ ಹಂತವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು,. ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕ ಮಾಡುವಂತಹ ತಪ್ಪು ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

ಜನಾದೇಶದ ಆಡಳಿತವನ್ನು ಕೊನೆಗಾಣಿಸುವುದು ಕಾನೂನಿಗೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿದೆ. ಗ್ರಾ.ಪಂ ಗಳು ಸಭೆ ಹಾಗೂ ಹಣಕಾಸಿನ ವ್ಯವಹಾರ ನಡೆಸಬಾರದೆಂದು ಸರ್ಕಾರ ತಿಳಿಸಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಅತಂತ್ರ ಪರಿಸ್ಥಿತಿಗೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಪರಿಸ್ಥಿತಿ ನಿರ್ವಹಿಸಲು ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿರುವ ಚುನಾಯಿತ ಸದಸ್ಯರು ಬೇಕು. ಅದಕ್ಕಾಗಿಯೇ ಜೂ.8 ರಂದು ಗ್ರಾಮೀಣಾಭಿವೃದ್ಧಿ ಇಲಾಖೆಯು ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮತ್ತು ಜವಾಬ್ದಾರಿಯನ್ನು ಉಲ್ಲೇಖಿಸಿ ಸುದೀರ್ಘ ಮಾರ್ಗದರ್ಶಿಯನ್ನು ಹೊರಡಿಸಿದೆ. ಆದರೆ ಜನಾದೇಶವಿರುವ ಸ್ಥಳೀಯ ಸರ್ಕಾರವೇ ಮುಂದುವರಿದು ಅಧಿಕಾರ ನಡೆಸುವುದು ರಾಜ್ಯ ಸರ್ಕಾರಕ್ಕೆ ಬೇಕಿಲ್ಲವೆಂದು ಯಾಕುಬ್ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ತಕ್ಷಣ ತನ್ನ ತಪ್ಪು ನಿರ್ಧಾರಗಳಿಂದ ಹಿಂದೆ ಸರಿದು ಚುನಾವಣೆ ನಡೆಯುವಲ್ಲಿಯವರೆಗೆ ಹಿಂದಿನ ಚುನಾಯಿತ ಆಡಳಿತ ಮಂಡಳಿಯನ್ನೇ ಮುಂದುವರೆಸಬೇಕೆಂದು ಒತ್ತಾಯಿಸಿದರು.

ಕೆದಕಲ್ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಲಕೃಷ್ಣ, ಬಲ್ಲಮಾವಟಿ ಗ್ರಾ.ಪಂ ಅಧ್ಯಕ್ಷೆಸರಸು ಪೆಮ್ಮಯ್ಯ, ಸದಸ್ಯ ಕುಮಾರ್ ಸೋಮಣ್ಣ, ಕೆ.ನಿಡುಗಣೆ ಗ್ರಾ.ಪಂ ಅಧ್ಯಕ್ಷೆ ರೀಟಾಮುತ್ತಣ್ಣ, ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲನ್ ನಾಯರ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

ಈ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಸಂಪರ್ಕಿಸಿದಾಗ, ಎಲ್ಲಾ ಬೆಳವಣಿಗೆಗಳನ್ನು ತಾವು ಸೂಕ್ಷ್ಮವಾಗಿ ಗಮನಿಸಿದ್ದು, ಸರಕಾರದಿಂದ ಇನ್ನಷ್ಟೇ ಅಧಿಕೃತ ಆದೇಶ ಹೊರಬೀಳಬೇಕಿದೆ. ಆಡಳಿತಾಧಿಕಾರಿಗಳ ನೇಮಕದ ಕುರಿತು ಆದೇಶ ಬಂದಲ್ಲಿ ಕೊಡಗು ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 104 ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.

ಸಮಿತಿ ರಚನೆ ಪ್ರಸ್ತಾಪ ಕೈಬಿಡಲಾಗಿದೆ: ಈ ಸಂಬಂಧ ವಿಧಾನಸಭೆಯ ಮಾಜಿ ಅಧ್ಯಕ್ಷ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತಿಕ್ರಿಯಿಸಿ, ಈ ಮೊದಲು ಗ್ರಾ.ಪಂ. ಆಡಳಿತ ಮುಗಿಯಲಿರುವ ಸಂದರ್ಭ ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಸಂಬಂಧ ಸಾರ್ವಜನಿಕ ವಲಯದ ಸಲಹಾ ಸಮಿತಿ ರಚಿಸುವ ಚಿಂತನೆ ನಡೆಸಲಾಗಿತ್ತು. ಆದರೆ ಇದೀಗ ಆ ಪ್ರಸ್ತಾವನೆಯನ್ನು ಸರಕಾರ ಕೈಬಿಟ್ಟಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂದೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು, ನೂತನ ವ್ಯವಸ್ಥೆ ಜಾರಿಗೊಳ್ಳುವ ತನಕ ಗ್ರಾ.ಪಂ.ಗಳ ಎಲ್ಲಾ ವ್ಯವಹಾರಗಳನ್ನು ಆಡಳಿತಾಧಿಕಾರಿಗಳೇ ನೋಡಿಕೊಳ್ಳಲಿದ್ದು, ಸರಕಾರ ಈಗಷ್ಟೇ ಸಂಪುಟ ಸಭೆಯ ನಿರ್ಧಾರ ಪ್ರಕಟಿಸಿದೆ. ಈ ಸಂಬಂಧ ಅಧಿಕೃತ ಆದೇಶ ಬಂದ ಬಳಿಕ ಜಿಲ್ಲಾಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಕೊಡಗು ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ, ಸರಕಾರದಿಂದ ಯಾವುದೇ ಆದೇಶ ಪತ್ರ ಬಂದಿಲ್ಲ. ಈ ಸಂಬಂಧ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss