ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮತ್ತೆ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಂದೇ ದಿನದಲ್ಲಿ 33 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ. ಇದೇ ಸಂದರ್ಭ ಆಸ್ಪತ್ರೆಯಿಂದ 18 ಮಂದಿ ಬಿಡುಗಡೆಯಾಗಿದ್ದಾರೆ.
ಮಂಗಳವಾರ ಸಂಜೆ ಶಿರಂಗಾಲದ ಈ ಹಿಂದಿನ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ವರ್ಷ ಪುರುಷ, ಶಿರಂಗಾಲ ಸಾಲುಕೊಪ್ಪಲುವಿನ 44 ವರ್ಷದ ಪುರುಷ, ಗೋಣಿಕೊಪ್ಪದ ಅಚ್ಚಪ್ಪ ಲೇಔಟ್ನ 43 ವರ್ಷದ ಮಹಿಳೆ, ಮಡಿಕೇರಿ ರಾಣಿಪೇಟೆಯ ಜ್ವರ ಲಕ್ಷಣವಿದ್ದ 38 ವರ್ಷ ಹಾಗೂ ತಾಳತ್ಮನೆಯ ಜ್ವರ ಲಕ್ಷಣವಿದ್ದ 34 ವರ್ಷದ ಪುರುಷರು, ಮಡಿಕೇರಿ ಗದ್ದಿಗೆಯ ಸೋಂಕಿತರ ಪ್ರಾಥಮಿಕ ಸಂಪರ್ಕದ 22ವರ್ಷದ ಪುರುಷ, ಸುಂಟಿಕೊಪ್ಪ ಎಮ್ಮೆಗುಂಡಿ ರಸ್ತೆಯ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 34 ವರ್ಷದ ಪುರುಷ ಹಾಗೂ ಅಂತರ ರಾಜ್ಯ ಪ್ರವಾಸ ಇತಿಹಾಸ ಹೊಂದಿದ್ದು, ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ 51 ವರ್ಷದ ಪುರುಷನಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 217ಕ್ಕೇರಿದ್ದು, ಈ ಪೈಕಿ 87 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ,ಮೂರು ಮಂದಿ ಸಾವಿಗೀಡಾಗಿದ್ದಾರೆ. 127 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 19 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆಯೂ 95ಕ್ಕೆ ಏರಿಕೆಯಾಗಿದೆ.