Saturday, August 13, 2022

Latest Posts

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರಗಳು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷಾ ಮಳೆಯ ತೀವ್ರತೆ ಗುರುವಾರ ಮತ್ತಷ್ಟು ಹೆಚ್ಚಿದ್ದು, ಬಲವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ಹಾಗೂ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿದ್ದು, ಭಾರೀ ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯಲಾರಂಭಿಸಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಹಲವು ಪ್ರದೇಶಗಳು ಜಲಾವೃತಗೊಂಡು ಮತ್ತು ಕೆಲವು ಕಡೆಗಳಲ್ಲಿ ಭೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಗಗಿತಗೊಂಡಿದೆ.

ಬುಧವಾರ ಸಂಜೆ ಮಡಿಕೇರಿ ಸಮೀಪದ ಮೇಕೇರಿಯ ಒಂದನೇ ಮೈಲು ಬಳಿ ಸಣ್ಣ ಪ್ರಮಾಣದ ಭು ಕುಸಿತ ಉಂಟಾಗಿದ್ದರೆ, ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಡಿಕೇರಿ ತಾಲೂಕಿನ ಬೇತ್ರಿ-ಮೂರ್ನಾಡು ರಸ್ತೆಯಲ್ಲಿ ಮರವೊಂದು ರಸ್ತೆ ಅಡ್ಡ ಬಿದ್ದು, ಸಂಚಾರಕ್ಕೆ ತೊಂದರೆಯಾಗಿದ್ದರೆ, ಕಡಗದಾಳು-ಚೆಟ್ಟಳ್ಳಿ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು.

ಜಿಲ್ಲಾಡಳಿತದ ಪ್ರಕೃತಿ ವಿಕೋಪ ಪರಿಹಾರ ತಂಡಗಳು ತಕ್ಷಣ ಕಾರ್ಯೋನ್ಮುಖವಾಗುವುದರೊಂದಿಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಆದರೆ ಗುರುವಾರ ಮತ್ತೆ ಹಲವೆಡೆ ಭೂಕುಸಿತ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆಗಳು ವರದಿಯಾಗಿವೆ.
ಭಾಗಮಂಡಲದಲ್ಲಿ ಕಾವೇರಿ ಹಾಗೂ ಕನ್ನಿಕೆ ನದಿಗಳು ತುಂಬಿ ಹರಿಯುತ್ತಿದ್ದು, ಪರಿಣಾಮವಾಗಿ ಮಡಿಕೇರಿ- ತಲಕಾವೇರಿ ಹಾಗೂ ನಾಪೋಕ್ಲು-ಭಾಗಮಂಡಲ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ.

ಸಿದ್ದಾಪುರ ಸಮೀಪದ ಕರಡಿಗೋಡು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಅಲ್ಲಿನ ಕೆಲವು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ನಾಪೋಕ್ಲು-ಕಲ್ಲುಮೊಟ್ಟೆ ರಸ್ತೆಯಲ್ಲಿ ಮರವೊಂದು ವಿದ್ಯುತ್ ಮಾರ್ಗದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಹಾಗೂ ತಂತಿ ತುಂಡಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು ಜಿ.ಎಂ. ಶಾಲೆಯ ಹಳೆಯ ಕಟ್ಟಡ ಗಾಳಿ ಮಳೆಯಿಂದಾಗಿ ಬಹುತೇಕ ಕುಸಿದಿದೆ.

ಶ್ರೀಮಂಗಲ ಹೋಬಳಿ ಹರಿಹರ ಗ್ರಾಮದ ನವೀನ್ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಮೇಲ್ಛಾವಣಿಗೆ ಹಾಕಲಾದ ಶೀಟ್‍ಗಳು ಹಾನಿಯಾಗಿವೆ. ಚೆಸ್ಕಾಂನ ಪರಿಹಾರ ತಂಡ ಭೇಟಿ ನೀಡಿ ಸೂಕ್ತ ಕ್ರಮ ವಹಿಸಿದೆ.
ಬಿಟ್ಟಂಗಾಲ-ಬಿ.ಶೆಟ್ಟಿಗೇರಿ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ.

ಮಕ್ಕಂದೂರು (ಉದಯಗಿರಿ) ಬಳಿ ಮರ ಬಿದ್ದು, ಮಡಿಕೇರಿ-ಸೋಮವಾರಪೇಟೆ ರಸ್ತೆ ಬಂದ್ ಆಗಿದ್ದು, ತೆರವುಗೊಳಿಸಲಾಗಿದೆ. ಗಾಳಿಬೀಡು ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ. ಉತ್ತರ ಕೊಡಗಿನ ಶನಿವಾರಸಂತೆ ಭಾಗದಲ್ಲೂ ಗಾಳಿ ಮಳೆಗೆ ಮರಗಳು ಉರುಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿರುವ ವರದಿಯಾಗಿದ್ದು, ಸ್ಥಳೀಯರ ನೆರವಿನಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಬರೆ ಕುಸಿತ:ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ಬುಧವಾರ ತಡರಾತ್ರಿ ಬರೆ ಜರಿದಿದ್ದು, ಪರಿಹಾರ ತಂಡ ಧಾವಿಸಿ ಪರಿಶೀಲನೆ ನಡೆಸಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಆ ಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಗಿದ್ದರೂ, ನಿವಾಸಿಗಳು ಒಪ್ಪದ್ದರಿಂದ, ರಾತ್ರಿ ಬೀಟ್ ಪೊಲೀಸರಿಗೆ ಆಗಾಗ್ಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ಸೂಚಿಸಲಾಗಿದೆ.

ಪ್ರವಾಹ ಸಂಭವ: ರ್ಯಾಫ್ಟ್ ನಿಯೋಜನೆ: ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಪ್ರವಾಹ ಉಂಟಾಗುವ ಸಂಭವವಿದ್ದು, ಅಲ್ಲಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಪಂಚಾಯತಿ ವತಿಯಿಂದ ಮಾಹಿತಿ ನೀಡಲಾಗಿದೆ ಹಾಗೂ ಮುನ್ನೆಚ್ಚರಿಕಾ ಕ್ರಮಕವಾಗಿ ಸ್ಥಳದಲ್ಲಿ ರಿವರ್ ರಾಫ್ಟಿಂಗ್ ತಂಡವನ್ನು ನಿಯೋಜಿಸಲಾಗಿದೆ.

ವೀರಾಜಪೇಟೆ ತಾಲೂಕು ಗೋಣಿಕೊಪ್ಪದಲ್ಲಿ ಸಹ ಭಾರೀ ಮಳೆಯಿಂದ ಕೀರೆಹೊಳೆಯಲ್ಲಿ ಪ್ರವಾಹ ಉಂಟಾಗುವ ಸಂಭವವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಿವರ್ ರಾಫ್ಟಿಂಗ್ ತಂಡ ಮತ್ತು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ.
ಮಡಿಕೇರಿ ನಗರದ ಮೈತ್ರಿಹಾಲ್‍ನ ಶೀಟ್‍ಗಳು ಹಾರಿ ಹೋಗಿದ್ದು, ರಿಪೇರಿಗೆ ಕ್ರಮ ವಹಿಸಲಾಗಿದೆ.

ಪ್ರಕೃತಿ ವಿಕೋಪದ ಮಾಹಿತಿ ಬಂದೊಡನೆ ಜಿಲ್ಲಾಡಳಿತದ ಪರಿಹಾರ ತಂಡವು ಕಾರ್ಯೋನ್ಮುಖವಾಗುತ್ತಿದ್ದು, ಸ್ಥಳೀಯ ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಸ್ಥಳೀಯ ಜನರು ಮತ್ತು ಸ್ವಯಂಸೇವಕರ ನೆರವಿನಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ.

ಭೂಕುಸಿತ: ಸಂಚಾರಕ್ಕೆ ಬದಲಿ ಮಾರ್ಗ: ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆಸುವ ಸಂಬಂಧ ಅಬ್ಬಿಯಾಲದಿಂದ ಚೆಟ್ಟಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈ ಭಾಗದ ಸ್ಥಳೀಯರು ಕತ್ತಲೆಕಾಡು-ಸಿದ್ದಾಪುರ ಮಾರ್ಗದಲ್ಲಿ ವಾಹನಗಳ ಮೂಲಕ ಸಂಚರಿಸುತ್ತಿದ್ದು, ಪ್ರಸಕ್ತ ಈ ಭಾಗದಲ್ಲೂ ಭೂಕುಸಿತವಾಗಿರುವುದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಬದಲಿ ರಸ್ತೆಯಾದ ಹಾಕತ್ತೂರು-ಮರಗೋಡು-ಸಿದ್ದಾಪುರ ಮಾರ್ಗವನ್ನು ಬಳಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.

ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಸಂ:221077 ಮತ್ತು ವಾಟ್ಸಪ್ ಸಂ:8550001077 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss