Friday, August 12, 2022

Latest Posts

ಕೊಡಗು ಜಿಲ್ಲೆಯಲ್ಲಿ ಮತ್ತೆ 14 ಮಂದಿಯಲ್ಲಿ ಸೋಂಕು ದೃಢ, ಓರ್ವ ಬಲಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಗುರುವಾರ ಆರೋಗ್ಯ ಕಾರ್ಯಕರ್ತರೊಬ್ಬರು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಕೋವಿಡ್ ಸಂಬಂಧದ ಸಾವಿನ ಸಂಖ್ಯೆ 9ಕ್ಕೇರಿದ್ದರೆ, ಸಂಜೆ ವೇಳೆಗೆ ಮತ್ತೆ 14 ಮಂದಿಯಲ್ಲಿ ಸೋಂಕು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆಯೂ 400ರ ಗಡಿ ತಲುಪಿದೆ.
ಮೃತರನ್ನು ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ನಿವಾಸಿ ಮತ್ತು ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕೇಂದ್ರದ 45 ವರ್ಷದ ಕಾರ್ಯಕರ್ತ ಗ್ರೂಪ್ ಡಿ ನೌಕರರು) ಎಂದು ಗುರುತಿಸಲಾಗಿದೆ.
ಇವರು ‘ಸಿಸ್ಟಮಿಕ್ ಲುಪಸ್ ಎರಥೆಮಟೋಸಸ್ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದಿನಿಂದಲೂ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.19ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಿದ್ದ ಇವರ ಗಂಟಲು, ಮೂಗು ದ್ರವ ಮಾದರಿಯನ್ನು ಮರುದಿನವೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅದೇ ದಿನ ಅವರನನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇವರು ಮಧುಮೇಹ ಮತ್ತು ಸಿಸ್ಟಮಿಕ್ ಲುಪಸ್ ಎರಥೆಮಟೋಸಸ್ ಕಾಯಿಲೆಯಿಂದ ಬಳಲುತ್ತಿದ್ದರಿಂದ ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಜು.29ರಂದು ಅವರ ಆರೋಗ್ಯದಲ್ಲಿ ತೀವ್ರ ಏರು ಪೇರಾದ್ದರಿಂದ ಮತ್ತೆ ಅವರ ಗಂಟಲು ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದರೊಂದಿಗೆ ತಕ್ಷಣವೇ ಅವರನ್ನು ಐ.ಸಿ.ಯು ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ 8.50 ಕ್ಕೆ ಅವರು ಮೃತಪಟ್ಟಿದ್ದು, ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಗುರುವಾರ ಅವರ ಪರೀಕ್ಷಾ ವರದಿಯಲ್ಲಿ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿರುವುದರೊಂದ ಇದನ್ನು ಕೋವಿಡ್ ಸೋಂಕಿನ ಸಾವು ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಮತ್ತೆ 14ಮಂದಿಯಲ್ಲಿ ಸೋಂಕು: ಗುರುವಾರ ಸಂಜೆ ಜಿಲ್ಲೆಯಲ್ಲಿ ಮತ್ತೆ 14 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 399ಕ್ಕೆ ಏರಿಕೆಯಾಗಿದೆ. ಈ ಪೈಕಿ 289 ಮಂದಿ ಗುಣಮುಖರಾಗಿದ್ದು, 101 ಸಕ್ರಿಯ ಪ್ರಕರಣಗಳಿರುವುದಾಗಿ ಅವರು ತಿಳಿಸಿದ್ದಾರೆ.
ಗುರುವಾರ ಸಂಜೆ ವೀರಾಜಪೇಟೆಯ ಮೊಗರ ಗಲ್ಲಿಯ 37 ವರ್ಷದ ಮಹಿಳೆ, 16 ವರ್ಷದ ಪುರುಷ,ಕಾಕೋಟುಪರಂಬುವಿನ 14 ವರ್ಷದ ಬಾಲಕಿ, ಮೇಕೇರಿ ಸುಭಾಷ್ ನಗರದ 31 ವರ್ಷದ ಪುರುಷ, ಪಾಲಿಬೆಟ್ಟದ 45 ವರ್ಷದ ಆರೋಗ್ಯ ಕಾರ್ಯಕರ್ತ, ಕಾನ್‍ಬೈಲ್ ಮಂಜಿಕೆರೆಯ 50 ವರ್ಷದ ಪುರುಷ, ಕುಶಾಲನಗರ ಬಸವನಹಳ್ಳಿಯ 51 ವರ್ಷದ ಪುರುಷ, ಮಡಿಕೇರಿ ತಾಲೂಕಿನ ಕರಡ ಪಾಲಂಗಾಲದ 60 ಮತ್ತು 30 ವರ್ಷದ ಪುರುಷರು, ಚೆಯ್ಯಂಡಾಣೆ ಮರಂದೋಡ 9ನೇ ಮೈಲ್‍ನ 40 ವರ್ಷದ ಮಹಿಳೆ, 56 ವರ್ಷದ ಪುರುಷ, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿಯ 32 ವರ್ಷದ ಪುರುಷ, ತ್ಯಾಗರಾಜ ಕಾಲೋನಿಯ 68 ವರ್ಷದ ಪುರುಷ ಹಾಗೂ ಮಹದೇವಪೇಟೆಯ 25 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿರುವುದಾಗಿ ಅವರು ವಿವರಿಸಿದ್ದಾರೆ.
ಈಲ್ಲೆಯಲ್ಲಿ ಹೊಸದಾಗಿ 11 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ಕಂಟೈನ್‍ಮೆಂಟ್ ಪ್ರದೇಶಗಳ ಸಂಖ್ಯೆಯೂ 99ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss