Thursday, August 18, 2022

Latest Posts

ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ದಾಳಿಗೆ 2 ವರ್ಷದಲ್ಲಿ 11 ಮಂದಿ ಬಲಿ!

ಮಡಿಕೇರಿ: ಕಳೆದ ಎರಡು ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ದಾಳಿಯಿಂದ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಮಂಡಲದ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವನ್ಯಪ್ರಾಣಿ ದಾಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಲ್ಲಿ ಸರ್ಕಾರದ ಆದೇಶದನ್ವಯ 5 ಲಕ್ಷ ರೂ.ಗಳನ್ನು ವಾರಸುದಾರರಿಗೆ ಒದಗಿಸಲಾಗಿದೆ. ಅಲ್ಲದೆ ಸರ್ಕಾರದ ಆದೇಶದನ್ವಯ 2020ರ ಜನವರಿ 7 ರ ಬಳಿಕ ವನ್ಯಪ್ರಾಣಿಗಳಿಂದ ಮೃತಪಟ್ಟಿರುವ ವ್ಯಕ್ತಿಯ ವಾರಸುದಾರರಿಗೆ ಈಗಾಗಲೇ ಪಾವತಿಸಲಾಗುತ್ತಿದ್ದ 5 ಲಕ್ಷ ರೂ.ಗಳ ದಯಾತ್ಮಕ ಧನವನ್ನು 7.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಅದರಂತೆ ನಿಯಮಾನುಸಾರ ಪರಿಶೀಲಿಸಿ ವಿತರಿಸಲಾಗುತ್ತದೆ ಎಂದು ವಿವರಿಸಿದರು.
ಅಲ್ಲದೆ ಸರ್ಕಾರದ ಆದೇಶದನ್ವಯ ಮೃತರ ಕುಟುಂಬದ ವಾರಸುದಾರರಿಗೆ 5 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನವನ್ನು ಸಹ ನೀಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.
ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ಅನಾವಶ್ಯಕ ವಿಳಂಬಕ್ಕೆ ಕಾರಣಗಳೇನು ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೀರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು ಎಂಬವರು 2020ರ ಮಾ.28 ರಂದು ಕಾಡೆಮ್ಮೆ ದಾಳಿಯಿಂದ ಮೃತಪಟ್ಟಿರುವ ಪ್ರಕರಣದಲ್ಲಿ ಮೃತ ವ್ಯಕ್ತಿಯ ವಾರಸುದಾರರಿಗೆ ದಯಾತ್ಮ ಧನ ಪಾವತಿಸುವ ಬಗ್ಗೆ ಗೊಂದಲದ್ದು, ಕೆಲವೊಂದು ದಾಖಲಾತಿಗಳನ್ನು ಒದಗಿಸುವಂತೆ ಕೋರಲಾಗಿದೆ. ದಾಖಲಾತಿಗಳು ಸ್ವೀಕೃತವಾದ ಕೂಡಲೇ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವೀರಾಜಪೇಟೆ ವಲಯದ ಕೊಳತ್ತೋಡು ಬೈಗೋಡು ಗ್ರಾಮದ ಮಾದ ಅವರು 2020ರ ಜು. 4 ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ನಿಯಮಾನುಸಾರ ದಯಾತ್ಮಕ ಧನವನ್ನು ಖಜಾನೆ-2 ತಂತ್ರಾಂಶದ ಮೂಲಕ ಬಿಲ್ ತಯಾರಿಸಿ ಬ್ಯಾಂಕ್ ಖಾತೆಗೆ ಪಾವತಿಸಬೇಕಾಗಿದೆ. ಆದರೆ ಈ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರು ಕೂಲಿ ಕಾರ್ಮಿಕರಾಗಿದ್ದು ಇವರಿಗೆ ಆಧಾರ್ ಕಾರ್ಡ್ ಹಾಗೂ ಯಾವುದೇ ಬ್ಯಾಂಕ್ ಖಾತೆ ಇಲ್ಲದ ಕಾರಣ ಪ್ರಸ್ತುತ ದಯಾತ್ಮಕ ಧನ ಪಾವತಿಸುವುದು ಬಾಕಿ ಇದೆ. ಈ ಎರಡು ಪ್ರಕರಣಗಳನ್ನು ಹೊರತುಪಡಿಸಿ ಇನ್ನಿತರ ಪ್ರಕರಣಗಳಲ್ಲಿ ಕೂಡಲೇ ಪರಿಹಾರ ಪಾವತಿ ಮಾಡಲಾಗಿದೆ ಸಚಿವರಾದ ಆನಂದ್ ಸಿಂಗ್ ಉತ್ತರಿಸಿದರು.
ಕೊಡಗು ಜಿಲ್ಲೆಗೆ 2019-2020ನೇ ಸಾಲಿಗೆ ರೂ.28.549 ಕೋಟಿ ಅನುದಾನ ಒದಗಿಸಲಾಗಿದ್ದು, ಪ್ರಮುಖವಾಗಿ ಅರಣ್ಯೀಕರಣ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತಿದೆ. ಭೂಕುಸಿತ ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಯಾವುದೇ ಕಾಮಗಾರಿ ಕೈಗೊಳ್ಳಲಾಗಿಲ್ಲ ಎಂದು ವೀಣಾ ಅಚ್ಚಯ್ಯ ಅವರ ಮತ್ತೊಂದು ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!