Thursday, August 11, 2022

Latest Posts

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಕೃತಿ ವಿಕೋಪ ನಿರ್ವಹಿಸುವಲ್ಲಿ ಜಿಲ್ಲಾಡಳಿತದಿಂದ ಸಮರೋಪಾದಿ ಕಾರ್ಯ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಂಟಾಗಿರುವ ಪ್ರಕೃತಿ ವಿಕೋಪವನ್ನು ನಿರ್ವಹಿಸುವಲ್ಲಿ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಬುಧವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಕೈಗೊಂಡ ಕ್ರಮದ ವಿವರ ಇಂತಿದೆ:
ಮಡಿಕೇರಿ ನಗರದ ಕನ್ನಿಕಾ ಬಡಾವಣೆಯಲ್ಲಿ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ ಹಾಕಲಾಗಿದೆ.
*ನಾಪೋಕ್ಲು-ಮಡಿಕೇರಿ ರಸ್ತೆ ಕೊಟ್ಟಮುಡಿ ಕೇಮಾಡಿನಲ್ಲಿ ಬೃಹದಾಕಾರದ ಮರ ಬಿದ್ದು, ವಿದ್ಯುತ್ ಕಂಬಗಳು ಹಾನಿಯಾಗಿತ್ತು. ಬಿದ್ದ ಮರವನ್ನು ತೆರವುಗೊಳಿಸಲಾಗಿದೆ ಮತ್ತು ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮ ವಹಿಸಲಾಗಿದೆ.
•ಹರದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸಲಾಗಿದೆ.
*ಕೂಡುಗದ್ದೆ-ಸಿದ್ಧಾಪುರ ರಸ್ತೆಗೆ ಅಡ್ಡವಾಗಿ ಮರ ಮತ್ತು ವಿದ್ಯುತ್ ಕಂಬ ಬಿದ್ದಿದ್ದು, ತೆರವುಗೊಳಿಸಲು ಕ್ರಮ ವಹಿಸಲಾಗಿದೆ.
• ಬೇಟೋಳಿ ಗ್ರಾಮದಲ್ಲಿ ಐ.ಎಸ್.ಮುತ್ತಣ್ಣನವರ ಮನೆ ಬಳಿ ಮರ ಬಿದ್ದು, ವಿದ್ಯುತ್ ತಂತಿ ನೆಲಕ್ಕೆ ಬಿದ್ದಿರುವುದನ್ನು ತೆರವುಗೊಳಿಸಲಾಗಿದೆ.
*ವೀರಾಜಪೇಟೆ ತಾಲ್ಲೂಕು ಶ್ರೀಮಂಗಲ ಹೋಬಳಿ ಹರಿಹರ ಗ್ರಾಮದಲ್ಲಿ ಪರಿವಾರರ ನವೀನ್ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಮತ್ತು ಮರ ಬಿದ್ದಿದ್ದು ತೆರವುಗೊಳಿಸಿ, ಸೂಕ್ತ ಕ್ರಮ ವಹಿಸಲಾಗಿದೆ.
ವೀರಾಜಪೇಟೆ ತಾಲೂಕು ಕಾಯಿಮನೆ ಎಂಬಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಸೂಕ್ತ ಕ್ರಮ ವಹಿಸಲಾಗಿದೆ.
*ಮಡಿಕೇರಿ-ವೀರಾಜಪೇಟೆ ರಸ್ತೆಯ ರಮ್ಯ ಸರ್ವೀಸ್ ಸ್ಟೇಷನ್ ಬಳಿ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ತೆರವುಗೊಳಿಸಲಾಗಿದೆ.
*ಮಡಿಕೇರಿ ನಗರದ ಕಾವೇರಿ ಬಡಾವಣೆಯಲ್ಲಿ ಚರಂಡಿ ಬ್ಲಾಕ್ ಆಗಿದ್ದು, ಬ್ಲಾಕ್ ತೆರವುಗೊಳಿಸಿ ನೀರು ಸುಗಮವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ.
*ಮಡಿಕೇರಿ-ಮಂಗಳೂರು ರಸ್ತೆ, ಮಡಿಕೇರಿ-ವೀರಾಜಪೇಟೆ ರಸ್ತೆಯ ಮೇಕೇರಿ ಬಳಿ ಭೂ ಕುಸಿತ ಉಂಟಾಗಿದ್ದು, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
*ಮಡಿಕೇರಿ ತಾ: ಕತ್ತಲೆಕಾಡು-ಸಿದ್ಧಾಪುರ ಮಾರ್ಗದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
*ಸೋಮವಾರಪೇಟೆ ಗೌಡಳ್ಳಿ ಪಂಚಾಯತಿ ವ್ಯಾಪ್ತಿ, ಶನಿವಾರಸಂತೆ, ಕುಶಾಲನಗರದ ಬಸವನಹಳ್ಳಿ ರಾಜ್ಯ ಹೆದ್ದಾರಿ, ಸೋಮವಾರಪೇಟೆ-ಬಾಣಾವಾರ ರಸ್ತೆ, ಶನಿವಾರಸಂತೆ-ಹಂಡ್ಲಿ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ.
*ವೀರಾಜಪೇಟೆ ತಾಲ್ಲೂಕು ತಿತಿಮತಿ, ಹೆಗ್ಗಳ, ಮಂಚಳ್ಳಿ-ಕುಟ್ಟ, ಗೋಣಿಕೊಪ್ಪ-ಬಾಳೆಲೆ, ಕುಂದ ರಸ್ತೆ, ಪೆರುಂಬಾಡಿ-ಮಾಕುಟ್ಟ ರಸ್ತೆ, ಕರಡಿಗೋಡು ರಸ್ತೆ, ಕೋತೂರು ರಸ್ತೆ, ನಾಲ್ಕೇರಿ ರಸ್ತೆ, ಕೆದಮುಳ್ಳೂರು-ಪಾಲಂಗಾಲ, ಪಾಲೇರಿ-ಕುಟ್ಟ ರಸ್ತೆ, ತೂಚಮಕೇರಿ ಗ್ರಾಮದ ರಸ್ತೆ, ಬಾಳೆಲೆ-ಗೋಣಿಕೊಪ್ಪ ರಸ್ತೆ, ಶ್ರೀಮಂಗಲ ಮಾರುಕಟ್ಟೆ ಬಳಿ, ಹೈಸೊಡ್ಲೂರು ಗ್ರಾಮದಲ್ಲಿ ರಸ್ತೆ, ಅಮ್ಮತ್ತಿ-ಒಂಟಿಯಂಗಡಿ ರಸ್ತೆ, ಅಮ್ಮತ್ತಿ-ಕೊಂಡಂಗೇರಿ ರಸ್ತೆ, ಪೆರುಂಬಾಡಿ-ಕಿರುಮಕ್ಕಿ ರಸ್ತೆ, ಕಾನೂರು ರಸ್ತೆ, ವಿರಾಜಪೇಟೆ-ಪೆರುಂಬಾಡಿ-ಬಿಟ್ಟಂಗಾಲ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ.
*ಮಡಿಕೇರಿ ತಾಲ್ಲೂಕು ಮರಗೋಡು-ಕತ್ತಲೆಕಾಡು, ನಾಪೋಕ್ಲು-ಕಲ್ಲುಮೊಟ್ಟೆ ರಸ್ತೆಯಲ್ಲಿ ಮರ ಮತ್ತು ವಿದ್ಯುತ್ ಕಂಬ, ಭಾಗಮಂಡಲ-ತಲಕಾವೇರಿ ರಸ್ತೆ, ಎಮ್ಮೆಮಾಡು-ಕರ್ಪಚಕ್ಕೆ ರಸ್ತೆ, ನಾಪೋಕ್ಲು-ನೆಲಜಿ ಮುಖ್ಯ ರಸ್ತೆಯ ಚೋನಕೆರೆ, ಮರಗೋಡು ಗ್ರಾಮದ ಕತ್ತಲೆಕಾಡು ರಸ್ತೆ, ಕೊಟ್ಟಗೇರಿ ಬಳಿ, ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಸ್ಥಾನ ರಸ್ತೆ, ಕತ್ತಲೆಕಾಡು -ಮರಗೋಡು ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ.
ವೀರಾಜಪೇಟೆ ಪಟ್ಟಣದ ನೆಹರು ನಗರ ಮತ್ತು ಅಯ್ಯಪ್ಪ ಸ್ವಾಮಿ ಬೆಟ್ಟ ಬಡಾವಣೆಯ ಒಟ್ಟು ೨೦ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ನಂದೀಶ್ ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪದ ಮಾಹಿತಿ ಬಂದೊಡನೆ ಜಿಲ್ಲಾಡಳಿತದ ಅರಣ್ಯ, ಪೊಲೀಸ್, ಲೋಕೋಪಯೋಗಿ, ಅಗ್ನಿ ಶಾಮಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಕಂದಾಯ ಇಲಾಖೆಗಳ ವಿಪತ್ತು ನಿರ್ವಹಣಾ ತಂಡಗಳು ಕಾರ್ಯೋನ್ಮುಖವಾಗುತ್ತಿದ್ದು ಸ್ಥಳೀಯ ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಸ್ಥಳೀಯ ಜನರು ಮತ್ತು ಸ್ವಯಂ ಸೇವಕರ ನೆರವಿನಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡುತ್ತದೆ.
ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಸಂ:221077 ಮತ್ತು ವಾಟ್ಸಪ್ ಸಂ:8550001077 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss