ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದೇಶದಿಂದ ಬಂದಿರುವ 24 ಹಾಗೂರಿತರ ರಾಜ್ಯಗಳಿಂದ ಬಂದಿರುವ ಒಟ್ಟು 184 ಮಂದಿಯನ್ನು ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇತರೆ ದೇಶ ಹಾಗೂ ರಾಜ್ಯಗಳಿಂದ ಪಾಸ್ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಕಡ್ಡಾಯವಾಗಿ ಸಾಂಸ್ಥಿಕ ಸಂಪರ್ಕ ತಡೆಯಲ್ಲಿಡಲಾಗುತ್ತಿದೆ. ಅದರಂತೆ ಇತರ ದೇಶಗಳಿಂದ ಬಂದಿರುವ 24 ಹಾಗೂ ಇತರ ರಾಜ್ಯಗಳ 160 ಮಂದಿಯನ್ನು ಸಂಪರ್ಕ ತಡೆಯಲ್ಲಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2715 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದ್ದು, 2633 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿವೆ. 79 ಪ್ರಕರಣಗಳಲ್ಲಿ ವರದಿ ನಿರೀಕ್ಷಿಸಲಾಗುತ್ತಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಪ್ರಸಕ್ತ 77 ಜನರು ದಾಖಲಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.