Tuesday, June 28, 2022

Latest Posts

ಕೊಡಗು ಜಿಲ್ಲೆಯಲ್ಲಿ 5800 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆ: ಜಿಲ್ಲಾಧಿಕಾರಿ

ಮಡಿಕೇರಿ: ಕೋವಿಡ್-19 ರ ಸಂಬಂಧ ಕೊಡಗು ಜಿಲ್ಲೆಯಲ್ಲಿ ಈವರೆಗೆ 5,800 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು ಈ ಪೈಕಿ 8 ಮಂದಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜಿಲ್ಲೆಯ 7 ನೇ ಸೋಂಕಿತೆ 17 ವರ್ಷದ ಬಾಲಕಿಯಾಗಿದ್ದು, 8 ನೇ ಸೋಂಕಿತ 14 ವರ್ಷದ ಬಾಲಕನಾಗಿದ್ದಾನೆ. ಈ ಎರಡೂ ಪ್ರಕರಣಗಳು ಜೂ. 22 ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ, ಶಿರಂಗಾಲ ಗ್ರಾಮದ ವ್ಯಾಪಾರಿಯ (ರೋಗಿ ಸಂಖ್ಯೆ 9215) ಮಕ್ಕಳಾಗಿದ್ದಾರೆ ಎಂದು ವಿವರಿಸಿದರು. ಇವರ ಪತ್ನಿ ಮತ್ತು ಒಂದು ಮಗುವಿಗೆ ಕೋವಿಡ್-19 ನೆಗೆಟಿವ್ ವರದಿ ಬಂದಿದೆ ಎಂದು ಅವರು ನುಡಿದರು.
ಶಿರಂಗಾಲದ ಹಣ್ಣು ವ್ಯಾಪಾರಿಯಾದ ರೋಗಿ ಸಂಖ್ಯೆ 9215ರ ಕುಟುಂಬ ಸದಸ್ಯರೆಲ್ಲರಿಗೂ ಸಹ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಈಗಾಗಲೇ ಈ ಕುಟುಂಬ ವಾಸವಿದ್ದ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಿರುವುದರಿಂದ ಈ 2 ಪ್ರಕರಣಗಳಲ್ಲಿ ಹೊಸ ಕಂಟೈನ್‍ಮೆಂಟ್ ವಲಯವನ್ನು ಘೋಷಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಇಬ್ಬರು ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರದಲ್ಲಿರಿಸಲಾಗಿದೆ. ದ್ವೀತೀಯ ಸಂಪರ್ಕಕ್ಕೆ ಬಂದವರನ್ನು ಗೃಹ ಸಂಪರ್ಕ ತಡೆಯಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.
ಜಿಲ್ಲೆಯ 8ನೇ ಸೋಂಕಿತನಾದ 14 ವರ್ಷದ ಬಾಲಕ ಶನಿವಾರಸಂತೆಯ ಗುಂಡೂರಾವ್ ಬಡವಣೆಯ ಸಂಬಂಧಿಕರ ಮನೆಗೆ ಭೇಟಿ ನೀಡಿ ವಾಸ್ತವ್ಯ ಮಾಡಿದ್ದು, ಆ ಸಂದರ್ಭದಲ್ಲಿ ಸುತ್ತ-ಮುತ್ತಲಿನ ಕೆಲವು ಮಕ್ಕಳೊಂದಿಗೆ ಸಂಪರ್ಕಕ್ಕೆ ಬಂದಿದ್ದು ಅವರ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ. ನಂತರ ಅವರನ್ನೂ ಸಹ ಕೋವಿಡ್-19 ತಪಾಸಣೆಗೊಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವೈದ್ಯರಿಗೂ ಸಂಪರ್ಕ ತಡೆ
ರೋಗಿ ಸಂಖ್ಯೆ 9215 (ಏಉಆ-5) ಸಂಪರ್ಕಕ್ಕೆ ಬಂದಿದ್ದ ಶನಿವಾರ ಸಂತೆಯ ಖಾಸಗಿ ಕ್ಲಿನಿಕ್‍ನ ವೈದ್ಯರನ್ನು ಸಾಂಸ್ಥಿಕ ಸಂಪರ್ಕ ತಡೆಯಲ್ಲಿರಿಸಲಾಗಿದೆ. ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ವಲಯದಿಂದ 2 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿದ್ದು, ಸರ್ಕಾರದ ನಿಯಮಾವಳಿಯಂತೆ ಇತರ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಾರದೆ ಪ್ರತ್ಯೇಕ ಕೊಠಡಿಯಲ್ಲಿ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 8 ಕೋವಿಡ್ ಸೋಂಕಿತ ಪ್ರಕರಣಗಳಾಗಿದ್ದು, 3 ಪ್ರಕರಣಗಳು ಗುಣಮುಖವಾಗಿವೆ. ಜಿಲ್ಲೆಯಲ್ಲಿ ಪ್ರಸ್ತುತ 5 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಮದುವೆಯಲ್ಲಿ ಭಾಗಿ
ಜಿಲ್ಲೆಯ 6ನೇ ಸೋಂಕಿತ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ಧಾಪುರ ಬಳಿಯ ದೊಡ್ಡಳ್ಳಿ ಗ್ರಾಮದ 26 ವರ್ಷದ ಮಹಿಳೆ ಗ್ರಾಮದಲ್ಲಿ ವಿವಾಹ ಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಆಲೂರು ಸಿದ್ದಾಪುರ, ಕೊಣನೂರು, ಹಾಸನಗಳಿಗೂ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
ಸೋಂಕಿತರ ಸ್ವಗ್ರಾಮಗಳಾದ ಶಿರಂಗಾಲ, ದೊಡ್ಡಳ್ಳಿ ಗ್ರಾಮಗಳನ್ನು ಕಂಟೈನ್‍ಮಂಟ್ ವಲಯಗಳಾಗಿ ಘೋಷಿಸಿ ಈ ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲಿನ ಗ್ರಾಮಸ್ಥರಿಗೆ ಅಗತ್ಯವಾದ ದಿನಸಿ, ತರಕಾರಿಗಳನ್ನು 28 ದಿನಗಳವರೆಗೆ ಜಿಲ್ಲಾಡಳಿತದಿಂದಲೇ ಒದಗಿಸಲಾಗುತ್ತದೆ.
ಸ್ವಯಂ ತಪಾಸಣೆ ಮಾಡಿಸಿಕೊಳ್ಳಿ 
ಕೋವಿಡ್-19 ರ ಸಂಬಂಧ ಜೂ. 22 ರಂದು ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ಶಿರಂಗಾಲ ಗ್ರಾಮದ ವ್ಯಾಪಾರಿಯೊಬ್ಬರು ಜೂ. 22 ರಂದು ಬೆಳಗ್ಗೆ 3 ಗಂಟೆಯಿಂದ 7 ಗಂಟೆಯವರೆಗೆ ಸೋಮವಾರಪೇಟೆಯ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿರುತ್ತಾರೆ. ಬೆಳಗ್ಗೆ 3 ಗಂಟೆಯಿಂದ 7 ಗಂಟೆಯ ಅವಧಿಯಲ್ಲಿ ಸೋಮವಾರಪೇಟೆ ಮಾರುಕಟ್ಟೆಯಲ್ಲಿದ್ದವರು ಸ್ವಯಂಪ್ರೇರಿತರಾಗಿ ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಗಂಟಲು,ಮೂಗು ದ್ರವ ಮಾದರಿಯನ್ನು ನೀಡುವಂತೆ ಅವರು ಕೋರಿದರು.
ಗಂಟಲು, ಮೂಗು ದ್ರವ ಮಾದರಿಯ ಸಂಗ್ರಹಣೆ ಬಳಿಕ ಅವರನ್ನು ಅವರವರ ಮನೆಗಳಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss