ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಚುರುಕುಗೊಂಡಿದ್ದ ಮುಂಗಾರು ಮಳೆ ಮಂಗಳವಾರದಿಂದ ಗಾಳಿಯೊಂದಿಗೆ ಧಾರಾಕಾರವಾಗಿ ಸುರಿಯಲಾರಂಭಿಸಿದ್ದು, ಜೀವನದಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯ ಹಲವೆಡೆಗಳಲ್ಲಿ ಅಲ್ಪಪ್ರಮಾಣದ ಭೂ ಕುಸಿತಗಳು ಉಂಟಾಗಿದ್ದರೆ, ಹಲವೆಡೆಗಳಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಾವೇರಿಯ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ವಿಭಾಗಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು, ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ 7.5ಇಂಚಿಗೂ ಹೆಚ್ಚಿನ ಮಳೆ ದಾಖಲಾಗಿದೆ.
ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಪುರ, ಕುಶಾಲನಗರ ವ್ಯಾಪ್ತಿಯಲ್ಲು ಉತ್ತಮ ಮಳೆÉಯಾಗುತ್ತಿದೆ.
ಬಲಮುರಿ ಹಳೇ ಸೇತುವೆ ಮುಳುಗಡೆ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮೂರ್ನಾಡು ಬಲಮುರಿಯಲ್ಲಿನ ಹಳೇ ಸೇತುವೆ ಮುಳುಗಡೆಯಾಗಿದ್ದು, ಸೇತುವೆಯ ಮೇಲೇ ನಾಲ್ಕು ಅಡಿಗಳಷ್ಟು ನೀರು ಹರಿದು ಹೋಗುತ್ತಿದೆ. ಹಳೇ ಸೇತುವೆಯ ಪಕ್ಕದಲ್ಲೇ ನೂತನ ಸೇತುವೆ ಇರುವುದರಿಂದ ಸಂಚಾರಕ್ಕೆ ತೊಡಕುಂಟಾಗಿಲ್ಲ.
ಕಾವೇರಿ ನದಿ ಪಾತ್ರದ ಕೊಂಡಂಗೇರಿ ಸೇತುವೆಯ ಬಳಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಗದ್ದೆಬಯಲುಗಳು ನೀರಿನಿಂದ ಆವೃತವಾಗಿದೆ. ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು ವ್ಯಾಪ್ತಿಯಲ್ಲೂ ಭಾರೀ ಸುರಿಯುತ್ತಿದ್ದು, ಲಕ್ಷ್ಮಣ ತೀರ್ಥ ನದಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಬೇಗೂರು ಕೊಲ್ಲಿಯಲ್ಲಿ ನದಿಯ ಪ್ರವಾಹದಿಂದ ಗದ್ದೆಬಯಲುಗಳು ಜಲಾವೃತಗೊಂಡಿವೆ.
ಅಲ್ಲಲ್ಲಿ ಬರೆ ಕುಸಿತ: ಮಡಿಕೇರಿ ನಗರದ ಮಂಗಳೂರು ರಸ್ತೆ ಐಬಿ ಬಳಿ ಹಾಗೂ ಸಮೀಪದ ತಾಳತ್ಮನೆ ಗ್ರಾಮದಲ್ಲಿ ಮನೆಯೊಂದರ ಹಿಂಭಾಗ ಅಲ್ಪ ಪ್ರಮಾಣದ ಬರೆ ಕುಸಿತವಾಗಿದ್ದು, ಯಾವುದೇ ಅನಾಹುತಗಳು ಸಂಭವಿಸಿಲ್ಲ.