Friday, July 1, 2022

Latest Posts

ಕೊಡಗು ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಕ್ರಮ: ಭನ್ವರ್ ಸಿಂಗ್ ಮೀನಾ

ಹೊಸದಿಗಂತ ವರದಿ, ಕೊಡಗು:

ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರದ ಆಶಯದಂತೆ ಎಲ್ಲಾ ಇಲಾಖೆಗಳಲ್ಲೂ ಕನ್ನಡ ಅನುಷ್ಠಾನಗೊಳಿಸಲು ನಾವೆಲ್ಲರೂ ಶ್ರಮವಹಿಸಬೇಕಾಗಿದೆ.ನಾನು ಉತ್ತರ ಭಾರತದವನಾದರೂ ಇಲ್ಲಿಗೆ ಬಂದನಂತರ ಆಸಕ್ತಿ ವಹಿಸಿ ಕನ್ನಡ ಕಲಿತಿದ್ದೇನೆ.ನನಗೆ ಹೆಮ್ಮೆಯಿದೆ.ಸರ್ಕಾರದಿಂದ ಕನ್ನಡದಲ್ಲಿ ಬರುವ ಸುತ್ತೋಲೆಗಳನ್ನು ಓದುತ್ತೇನೆ.ಕನ್ನಡದಲ್ಲಿಯೇ ಉತ್ತರಿಸುತ್ತೇನೆ ಹಾಗೆಯೇ ಇಲ್ಲಿ ಎಲ್ಲರೂ ಕನ್ನಡ ಬಳಸಬೇಕು,ಬೆಳೆಸಬೇಕೆಂದರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಮಾತನಾಡಿ, ಜಿಲ್ಲೆಯ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ತಿಂಗಳಿಗೊಮ್ಮೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸುವಂತಾಗಬೇಕು.ಜಿಲ್ಲೆಯ ಬ್ಯಾಂಕ್ ಗಳಲ್ಲಿ ಚಲನ್ ಸೇರಿದಂತೆ ನಮೂನೆಗಳೆಲ್ಲಾ ಕನ್ನಡದಲ್ಲಿರುವಂತೆ ಕ್ರಮ ವಹಿಸಬೇಕು.

ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಪ್ರಧಾನವಾಗಿರುವಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚದೆ ಅವುಗಳ ಅಭಿವೃದ್ಧಿಪಡೊಸಬೇಕು.ಹಾಗೂ ಮಕ್ಕಳು ಕನ್ನಡ ಶಾಲೆಗಳಿಗೆ ಸೇರುವಂತೆ ಪ್ರೇರೇಪಿಸುವ ಯೋಜನೆ ರೂಪಿಸಬೇಕು.ಒಟ್ಟಿನಲ್ಲಿ ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನ ಗೊಳ್ಳಬೇಕು ಎಂದರು.

ಸಮಿತಿ ಸದಸ್ಯ ಈ.ರಾಜು ಮಾತನಾಡಿ ಜಿಲ್ಲೆಯ ಗಡಿಭಾಗಗಳಲ್ಲಿ ಕನ್ನಡಕ್ಕೆ ಉತ್ತೇಜನ ನೀಡಬೇಕು.ಅಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ನಮ್ಮ ಭಾಷೆಯ ಬೆಳವಣಿಗೆ ಬಗ್ಗೆ ಗಮನ ಹರಿಸಬೇಕೆಂದರು.

ಸಮಿತಿಯ ಮತ್ತೋರ್ವ ಸದಸ್ಯ ಕಾಜೂರು ಸತೀಶ್ ಮಾತನಾಡಿ,ಕೋವಿಡ್ ನಂತರ ಸಾಕಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಅವರನ್ನು ಸರ್ಕಾರಿ ಶಾಲೆಯಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಕನ್ನಡ ಜಾಗೃತಿ ಸಮಿತಿಯ ಕಾರ್ಯದರ್ಶಿ ದರ್ಶನಾ ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಗೊಳಿಸಲು ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ.ಮುಂದಿನ ದಿನಗಳಲ್ಲಿ ಜಾಗೃತಿ ಸಮಿತಿ ಸದಸ್ಯರೊಡಗೂಡಿ ಉತ್ತಮ ಕೆಲಸ ಮಾಡಲಾಗುವುದೆಂದರು.

ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಕಾರ್ಯಗತಗೊಳಿಸುವಂತೆ ಹಾಗೂ ಸಭೆಯ ನಡಾವಳಿಗಳನ್ನು ಎಲ್ಲಾ ಇಲಾಖೆಗಳಿಗೂ ಕಳುಹಿಸುವಂತೆ ಇಲಾಖೆಯ ಸಹಾಯಕ ನಿದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಭಾರತಿ ರಮೇಶ್,ರಂಜಿತಾ ಕಾರ್ಯಪ್ಪ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss