Wednesday, July 6, 2022

Latest Posts

ಕೊಡಗು| ಡಿ.22ರಂದು 357 ಮತಗಟ್ಟೆಗಳಲ್ಲಿ ನಡೆಯಲಿದೆ ಮತದಾನ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 26 ಹಾಗೂ ಸೋಮವಾರಪೇಟೆ ತಾಲೂಕಿನ 40 ಸೇರಿದಂತೆ 66 ಗ್ರಾಮ
ಪಂಚಾಯತ್‍ಗಳ 357 ಮತಗಟ್ಟೆಗಳಲ್ಲಿ ಡಿ.22ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ
ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
6 ಕೇತ್ರಗಳಲ್ಲಿ ಚುನಾವಣೆ ಇಲ್ಲ: ಮಡಿಕೇರಿ ತಾಲೂಕಿನ ಗಾಳಿಬೀಡು ಪಂಚಾಯತ್‍ನ 2ನೇ ಮೊಣ್ಣಂಗೇರಿ, ಕೆ.ನಿಡುಗಣೆ ಪಂ.ನ ಹೆಬ್ಬೆಟ್ಟಗೇರಿ ಹಾಗೂ ನಾಪೋಕ್ಲು ಪಂಚಾಯತ್‍ನ ಕೊಳಕೇರಿ 1ನೇ ವಾರ್ಡ್ ಹಾಗೂ ಸೋಮವಾರಪೇಟೆ ತಾಲೂಕಿನ ಗಣಗೂರು ಪಂಚಾಯತ್‍ನ ಗೋಣಿಮರೂರು-2, ಕೊಡಗರಹಳ್ಳಿ ಪಂಚಾಯತ್‍ನ ಅಂದಗೋವೆ-2 ಹಾಗೂ ಗರ್ವಾಲೆ ಪಂಚಾಯತ್‍ನ ಶಿರಂಗಳ್ಳಿ
-2 ವಾರ್ಡ್‍ಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ತಲಾ 3 ಕ್ಷೇತ್ರಗಳಿಗೆ ಚುನಾವಣೆ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
43 ಸ್ಥಾನಗಳಿಗೆ ಅವಿರೋಧ ಆಯ್ಕೆ: ಇದಲ್ಲದೆ ಮಡಿಕೇರಿ ತಾಲೂಕಿನ 24 ಹಾಗೂ ಸೋಮವಾರಪೇಟೆ ತಾಲೂಕಿನ 19 ಸೇರಿದಂತೆ ಒಟ್ಟು 43 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಮಡಿಕೇರಿ ತಾಲೂಕಿನ ಹೊದ್ದೂರು ಪಂಚಾಯತ್‍ನ ಕುಂಬಳದಾಳು, ಎಮ್ಮೆಮಾಡು ಪಂಚಾಯತ್‍ನ ಎಮ್ಮೆಮಾಡು-1 ಮತ್ತು ಎಮ್ಮೆಮಾಡು-2, ತೋಳೂರುಶೆಟ್ಟಳ್ಳಿ ಪಂಚಾಯತ್‍ನ ಕೂತಿ-2ನೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದ ಕಾರಣ ಮಡಿಕೇರಿ ತಾಲೂಕಿನ 3 ಹಾಗೂ ಸೋಮವಾರಪೇಟೆ ತಾಲೂಕಿನ ಒಂದು ಸ್ಥಾನಕ್ಕೆ ಚುನಾವಣೆ ನಡೆಯುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಳಿದಂತೆ ಮಡಿಕೇರಿ ತಾಲೂಕಿನ 135 ಹಾಗೂ ಸೋಮವಾರಪೇಟೆ ತಾಲೂಕಿನ ಒಟ್ಟು 357 ಮತಗಟ್ಟೆಗಳಲ್ಲಿ ಡಿ.22ರ ಪೂರ್ವಾಹ್ನ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೂಕ್ಷ್ಮ-ಅತಿಸೂಕ್ಷ್ಮ ಮತಗಟ್ಟೆಗಳು: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಡಿಕೇರಿ ತಾಲೂಕಿನ 45 ಮತಗಟ್ಟೆಗಳನ್ನು ಸೂಕ್ಷ್ಮ, 6 ಅತಿಸೂಕ್ಷ್ಮ ಹಾಗೂ 8 ಮತಗಟ್ಟೆಗಳನ್ನು ನಕ್ಸಲ್ ಪೀಡಿತ ಹಾಗೂ 80 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದ್ದು, ಅದೇ ರೀತಿ ಸೋಮವಾರಪೇಟೆ ತಾಲೂಕಿನಲ್ಲಿ 48 ಸೂಕ್ಷ್ಮ, 24 ಅತಿಸೂಕ್ಷ್ಮ ಹಾಗೂ 154 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಮಡಿಕೇರಿ ತಾಲೂಕಿನ 34 ಹಾಗೂ ಸೋಮವಾರಪೇಟೆ ತಾಲೂಕಿನ 29 ಮತಗಟ್ಟೆಗಳನ್ನು ಮಾನವ-ಪ್ರಾಣಿ ಸಂಘರ್ಷ ಇರುವ ಪ್ರದೇಶದ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
157 ವಾಹನಗಳ ಬಳಕೆ: ಡಿ.22ರಂದು ನಡೆಯಲಿರುವ ಚುನಾವಣಾ ಕಾರ್ಯಕ್ಕಾಗಿ ಮಡಿಕೇರಿ ತಾಲೂಕಿಗೆ 20 ಬಸ್, 18 ಮಿನಿಬಸ್, 8 ಮ್ಯಾಕ್ಸಿಕ್ಯಾಬ್, 22 ಜೀಪು ಸೇರಿದಂತೆ 68 ಹಾಗೂ ಸೋಮವಾರಪೇಟೆ ತಾಲೂಕಿಗೆ 30 ಬಸ್, 8 ಮಿನಿಬಸ್, 14 ಮ್ಯಾಕ್ಸಿಕ್ಯಾಬ್ ಹಾಗೂ 30 ಜೀಪು ಸೇರಿದಂತೆ 82 ವಾಹನಗಳನ್ನು ನಿಯೋಜಿಸಲಾಗಿದೆ.
ಪ್ರತಿಯೊಂದು ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು 3 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅದರಂತೆ ಮಡಿಕೇರಿ ತಾಲೂಕಿಗೆ ತಲಾ 160 ಮಂದಿ ಪಿಆರ್‍ಒ ಹಾಗೂ ಎಪಿಆರ್‍ಒ ಸಹಿತ 320 ಪೋಲಿಂಗ್ ಆಫಿಸರ್‍ಗಳು, ಸೋಮವಾರಪೇಟೆಗೆ ತಲಾ 250 ಪಿಆರ್‍ಒ ಹಾಗೂ ಎಪಿಆರ್‍ಒ ಸಹಿತ 500 ಪೋಲಿಂಗ್ ಆಫಿಸರ್‍ಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮದ್ಯ ಮಾರಾಟ-ಸಂತೆ, ಜಾತ್ರೆ ನಿಷೇಧ: ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಡಿ.21ರ ಮಧ್ಯರಾತ್ರಿ 12 ಗಂಟೆಯಿಂದ 12ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ವಿಧದ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದ್ದು, ಡಿ.20ರ ಸಂಜೆ 5ಗಂಟೆಯಿಂದ 22ರ ಸಂಜೆ 5ಗಂಟೆಯವರೆಗೆ ಎಲ್ಲಾ ವಿಧದ ಮದ್ಯಗಳ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್ ಹಾಗೂ ಹೊಟೇಲ್‍ಗಳಲ್ಲಿ ಎಲ್ಲಾ ವಿಧದ ಮದ್ಯಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕೇರಳ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮತದಾನದ ಹಿಂದಿನ ದಿನ ಮತ್ತು ಮತದಾನದಂದು 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲು ಕೋರಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss