Saturday, July 2, 2022

Latest Posts

ಕೊಡಗು| ಪ್ರತಿ ತಾಲೂಕಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ : ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಸೂಚನೆ

ಮಡಿಕೇರಿ : ಪ್ರತೀ ತಾಲೂಕುಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಅವರು ಸೂಚಿಸಿದ್ದಾರೆ.
ನಗರದ ನೂತನ ಜಿ.ಪಂ.ಸಭಾಂಗಣದಲ್ಲಿ 15 ನೇ ಹಣಕಾಸು ಆಯೋಗದ ಯೋಜನೆಯ ಅನುದಾನಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
15 ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ಜಿಲ್ಲಾ ಪಂಚಾಯಿತಿಗೆ ಒಟ್ಟು ರೂ.2.21 ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ರೂ.55,48,822 ಸಾಮುದಾಯಿಕ ನೈರ್ಮಲ್ಯ ಕಾಮಗಾರಿಗಳಿಗೆ ಮೀಸಲಿಟ್ಟ ಹಣವನ್ನು ಮತ್ತು ತಾಲೂಕು ಪಂಚಾಯಿತಿ ಅನುದಾನವನ್ನು ಬಳಕೆ ಮಾಡಿಕೊಂಡು ಪ್ರತೀ ತಾಲೂಕು ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣೆಯಿಂದ ಗೊಬ್ಬರ ಉತ್ಪಾದನಾ ಘಟಕವನ್ನು ನಿರ್ಮಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ, 15 ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಳ್ಳಲು ನಿಗದಿಪಡಿಸಿದ ಮಾನದಂಡಗಳ ಕುರಿತು ಸಭೆಗೆ ಮಾಹಿತಿ ನೀಡಿ ಮೂಲ ಅನುದಾನ ರೂ. 1,10,97,643(ಶೇ.50), ನಿರ್ಬಂಧಿತ ಅನುದಾನ ರೂ.1,10,97,644(ಶೇ.50) ಒಟ್ಟು 2,21,98,294 ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ರೂಪಿಸಬೇಕಾಗಿದೆ. ಇದರಲ್ಲಿ ಸಾಮುದಾಯಿಕ ಕುಡಿಯುವ ನೀರಿನ ಕಾಮಗಾರಿಗಳಿಗೆ ರೂ.55,48,822 ಮತ್ತು ಸಾಮುದಾಯಿಕ ನೈರ್ಮಲ್ಯ ಕಾಮಗಾರಿಗಳಿಗೆ ರೂ.55,48,822 ಮೀಸಲಿಟ್ಟು ಕ್ರಿಯಾ ಯೋಜನೆ ರೂಪಿಸಬೇಕಾಗಿರುತ್ತದೆ ಎಂದು ತಿಳಿಸಿದರು.
15ನೇ ಹಣಕಾಸು ಯೋಜನೆಯ ಕಾಮಗಾರಿಗಳು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಒಳಪಟ್ಟಿದ್ದು, ನಿಯಮಾವಳಿ ಅನುಸಾರ ಕ್ರಿಯಾ ಯೋಜನೆಯನ್ನು ತುರ್ತಾಗಿ ಸಿದ್ಧಪಡಿಸಿ ಅನುದಾನವನ್ನು ಬಳಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಹಿಂಬಾಕಿ ಕೆಲಸ ಪೂರ್ಣಗೊಳಿಸಿ : ಹಿಂಬಾಕಿ ಕೆಲಸಗಳು ಇನ್ನೂ ಮುಗಿಯದಿರುವ ಬಗ್ಗೆ ಸಭೆಯಲ್ಲಿ ಅಸಮಾದಾನ ವ್ಯಕ್ತಪಡಿಸಿದ ಹಲವು ಜಿ.ಪಂ.ಸದಸ್ಯರುಗಳು ಹಿಂಬಾಕಿ ಕಾಮಗಾರಿಗಳನ್ನು ಮುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆ.ಲಕ್ಷ್ಮಿಪ್ರಿಯ ಅವರು ಹಿಂಬಾಕಿ ಕೆಲಸಗಳನ್ನು ಮುಂದುವರಿಸಲು ಯಾವುದೇ ತೊಂದರೆಯಿರುವುದಿಲ್ಲ. ಹಾಗೂ ಅನುದಾನದ ಕೊರತೆ ಉಂಟಾಗುವುದಿಲ್ಲ ಎಂದರು.
2020-21 ನೇ ಸಾಲಿಗೆ ಕರ್ನಾಟಕ ರಾಜ್ಯಕ್ಕೆ 15 ನೇ ಹಣಕಾಸು ಆಯೋಗದ ಅನುದಾನದಲ್ಲಿ ರೂ.3217 ಕೋಟಿಗಳನ್ನು ನಿಗದಿಪಡಿಸಿದೆ. ಈ ಅನುದಾನದಲ್ಲಿ ರಾಜ್ಯ ಸರ್ಕಾರವು ಶೇ.85 ರಷ್ಟು ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ, ಶೇ.10 ರಷ್ಟು ಅನುದಾನವನ್ನು ತಾಲೂಕು ಪಂಚಾಯಿತಿಗಳಿಗೆ ಮತ್ತು ಶೇ.5 ರಷ್ಟು ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ನಿಗದಿಪಡಿಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಅವರು ಮಾತನಾಡಿ, ಕಸ ವಿಲೇವಾರಿ ಘಟಕದಲ್ಲಿ ದೊರೆಯುವ ತ್ಯಾಜ್ಯ ಸಂಸ್ಕರಣೆ ಗೊಬ್ಬರವನ್ನು ತೋಟಗಾರಿಕಾ ಇಲಾಖೆಯವರು ಸಂಸ್ಕರಿಸಿ ರೈತರಿಗೆ ಹಂಚಿಕೆ ಮಾಡಿದಲ್ಲಿ ಪಂಚಾಯಿತಿಗಳು ಉತ್ತಮ ಆದಾಯವನ್ನು ಗಳಿಸುವುದರೊಂದಿಗೆ ಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ.ಪಂ.ಮಟ್ಟದಲ್ಲಿರುವ ಕಸ ವಿಲೇವಾರಿ ಘಟಕಗಳಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಸಮಸ್ಯೆಗಳು ಉದ್ಭವಿಸಿದೆ. ಇದನ್ನು ಸರಿಪಡಿಸಿ ಎಂದು ಬಹುತೇಕ ಜಿ.ಪಂ.ಸದಸ್ಯರು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ ಒಟ್ಟು 104 ಪಂಚಾಯಿತಿಗಳಲ್ಲಿ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸಿದ್ದು, ಕೆಲವು ಪಂಚಾಯಿತಿಗಳಲ್ಲಿ ನಿರ್ಮಾಣ ಹಂತದಲ್ಲಿರುವುದಾಗಿ ಹಾಗೂ ಬಾಕಿ ಒಟ್ಟು 10 ಗ್ರಾ.ಪಂ.ಗಳಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಬಾಕಿ ಇರುವುದಾಗಿ ತಿಳಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಸ್ತುತ ಕಸ ವಿಲೇವಾರಿ ಘಟಕಗಳಲ್ಲಿ ಕೆಲವು ನ್ಯೂನತೆಗಳಿದ್ದು, ಇವುಗಳನ್ನು ಸರಿಪಡಿಸಲಾಗುವುದೆಂದರಲ್ಲದೆ, ಸೂಕ್ತ ನಿರ್ವಹಣೆಗೆ ತಾ.ಪಂ.ಇಒಗಳಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ವಿದ್ಯುತ್ ಸಂಪರ್ಕವಾಗಿಲ್ಲ : ಗ್ರಾಮೀಣ ಭಾಗದ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಕೂಡ ಕಲ್ಪಿಸಲಾಗಿರುವುದಿಲ್ಲ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯ ಕೆಲವು ಸದಸ್ಯರು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಅವರು 2010ನೇ ಸಾಲಿನಿಂದ ಬಾಕಿಯಿದ್ದ 10 ಕೋಟಿ ವಿದ್ಯುತ್ ಶುಲ್ಕದಲ್ಲಿ ಇದುವರೆಗೆ 5 ಕೋಟಿಯನ್ನು ಪಾವತಿಸಲಾಗಿದ್ದು, ಬಾಕಿ ಇರುವ ಮೊತ್ತವನ್ನು ಪಾವತಿ ಮಾಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಸದಸ್ಯ ಶಿವು ಮಾದಪ್ಪ ಅವರು ಮಾತನಾಡಿ, ಜಿ.ಪಂ. ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಹಾಲಿ ಇರುವ ಎಸ್‍ಆರ್ ದರವನ್ನು ಪರಿಷ್ಕರಿಸಿ ಹೊಸ ಎಸ್‍ಆರ್ ದರವನ್ನು ನಿಗದಿಪಡಿಸಬೇಕು ಎಂದು ಸಲಹೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಅವರು, ಸದಸ್ಯರ ಸಲಹೆಯಂತೆ ಹಾಲಿ ಇರುವ ಎಸ್‍ಆರ್ ದರವನ್ನು ಪರಿಷ್ಕರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿ.ಪಂ. ಸಿಇಒ ಗೆ ಸೂಚನೆ ನೀಡಿದರು.
ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಸೋಮವಾರಪೇಟೆ ಮತ್ತು ಮಡಿಕೇರಿ ವ್ಯಾಪ್ತಿಯ ಜಿ.ಪಂ. ಸಂಬಂಧಿಸಿದ ಕಾಮಗಾರಿಗಳ ಅನುದಾನ ಸಕಾಲದಲ್ಲಿ ಬಳಸಿಕೊಳ್ಳದೇ ಇದ್ದುದರಿಂದ ಖಜಾನೆ ಹಿಂತೆಗೆದುಕೊಂಡಿದೆ. ಅನುದಾನ ವಾಪಸ್ಸು ಹೋಗಿದ್ದಕ್ಕೆ ಹೊಣೆ ಯಾರು ? ಹೀಗೆ ಆದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಂಬಂಧಪಟ್ಟ ತಾ.ಪಂ.ಇಒಗಳು ಸಕಾಲದಲ್ಲಿ ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಿದರೂ ಕೆಲವು ವಿಳಂಬದಿಂದಾಗಿ ಅನುದಾನ ವಾಪಸ್ಸು ಹೋಗಿರುವುದಾಗಿ ತಿಳಿಸಿದರಲ್ಲದೆ, ಇದು ಕೇವಲ ನಮ್ಮ ಈ ಎರಡು ತಾಲೂಕುಗಳಲ್ಲಿ ಆಗಿರುವುದಲ್ಲ. ರಾಜ್ಯದಲ್ಲಿ ಹಲವು ತಾಲೂಕುಗಳಲ್ಲಿ ಈ ರೀತಿ ತೊಂದರೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಈ ಸಂಬಂಧ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಅಗತ್ಯ ಕ್ರಮಕೈಗೊಳ್ಳಲಾಗಿದೆ. ಪುನಃ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿ.ಪಂ.ಸದಸ್ಯರಾದ ದೀಪಕ್ ಅವರು 15 ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯಲ್ಲಿ ಸಮುದಾಯಿಕ ಕುಡಿಯುವ ನೀರಿನ ಕಾಮಗಾರಿಗಳಿಗೆ ಮೀಸಲಿರುವ 55.48 ಲಕ್ಷವನ್ನು ಎಲ್ಲಾ 29 ಸದಸ್ಯರುಗಳ ಕ್ಷೇತ್ರಕ್ಕೆ ಸಮನಾಗಿ ಹಂಚಿಕೆ ಮಾಡಿದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ ಎಂದು ಸಭೆಯ ಗಮನ ಸೆಳೆದರು.
ಇದಕ್ಕೆ ಸರ್ವ ಸದಸ್ಯರು ಅಭಿಮತ ವ್ಯಕ್ತಪಡಿಸಿ ಜಿ.ಪಂ. ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಅವರು ಸದಸ್ಯರ ಅಭಿಮತದಿಂದ ಅಗತ್ಯ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಕಳುಹಿಸುವಂತೆ ಜಿ.ಪಂ. ಸಿಇಒ ಅವರಿಗೆ ಸೂಚನೆ ನೀಡಿದರು.
ಜಿ.ಪಂ. ಸದಸ್ಯರಾದ ಬಾನಂಡ ಪ್ರಥ್ಯು ಅವರು ಕಸ ವಿಲೇವಾರಿ ಘಟಕಗಳ ನಿರ್ವಹಣೆ, ಕಾಮಗಾರಿಗಳ ವಿಳಂಬ ಹೀಗೆ ಹಲವು ವಿಷಯಗಳ ಬಗ್ಗೆ ಸಭೆಯ ಗಮನಸೆಳೆದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಪ್ರಭಾಕರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಪ್ಪಂಡೇರಂಡ ಭವ್ಯಾ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳಾ, ಜಿ.ಪಂ. ಸದಸ್ಯರಾದ ಮುರಳಿ ಕರುಂಬಮ್ಮಯ್ಯ, ಕಿರಣ್ ಕಾರ್ಯಪ್ಪ, ಸಿ.ಕೆ.ಬೋಪಣ್ಣ, ಎಂ.ಕೆ.ವಿಜು ಸುಬ್ರಮಣಿ, ಮೂಕೊಂಡ ಪಿ.ಸುಬ್ರಮಣಿ, ಎಚ್.ಆರ್.ಶ್ರೀನಿವಾಸ್, ಸಿ.ಪಿ.ಪುಟ್ಟರಾಜು, ಪಿ.ಆರ್.ಪಂಕಜ, ಲತೀಫ್, ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss