ಮಡಿಕೇರಿ: ತಾಲೂಕಿ ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಪ್ರವಾಹ ಪೀಡಿತ ಪ್ರದೇಶಗಳ ಹಲವು ಕುಟುಂಬಗಳ ಮನೆಗಳು ಕುಸಿದಿವೆ, ಗದ್ದೆಗಳಿಗೆ ಮರಳು ಮತ್ತು ಮಣ್ಣು ತುಂಬಿ ಸಾಕಷ್ಟು ನಷ್ಟ ಉಂಟಾಗಿದೆ. ಈ ಭಾಗದಲ್ಲಿ 7 ಕ್ಕೂ ಹೆಚ್ವು ಸೇತುವೆಗಳು ಕೊಚ್ಚಿ ಹೋಗಿವೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದರು. ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕಿಂತ ದುಪ್ಪಟ್ಟಾಗಿದೆ. ಇಲ್ಲಿನ ಜನರ ಕಷ್ಟ ಹೇಳತೀರದು ಎಂದು ಶಾಸಕರು ನೋವು ವ್ಯಕ್ತಪಡಿಸಿದರು. ಕೋರಂಗಾಲ, ಚೇರಂಗಾಲ ಮತ್ತು ತಣ್ಣಿಮಾನಿ ಗ್ರಾಮದ ಜನರ ಅಹವಾಲು ಆಲಿಸಿದರು. ಹಾಗೆಯೇ ಕೋಳಿಕಾಡು ಕಾಲೋನಿಗೆ ಭೇಟಿ ನೀಡಿ, ಇಲ್ಲಿನ ಮೂರು ಮನೆಗಳಿಗೆ ಬರೆ ಕುಸಿದಿರುವುದನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ವೀಕ್ಷಿಸಿದರು. ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್, ತಹಶೀಲ್ದಾರ್ ಮಹೇಶ್, ಕಂದಾಯಾಧಿಕಾರಿಗಳು, ಸ್ಥಳೀಯರು ಇದ್ದರು.