Monday, July 4, 2022

Latest Posts

ಕೊಡಗು | ಪ್ರಾಕೃತಿಕ ವಿಕೋಪ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಜ್ಜು , 104 ಗ್ರಾ.ಪಂ.ಗಳಿಗೆ ತಲಾ 50 ಸಾವಿರ ಅನುದಾನ ಬಿಡುಗಡೆ

ಮಡಿಕೇರಿ: ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಗ್ರಾಮ ಮತ್ತು ಪಟ್ಟಣ ಪಂಚಾಯಿತಿಗಳು ಪ್ರಥಮವಾಗಿ ಪರಿಹಾರ ವಿತರಿಸುವ ಸಂಸ್ಥೆಗಳಾಗಿರುವುದರಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ತಲಾ 50 ಸಾವಿರ ಹಾಗೂ ಮೂರು ಪಟ್ಟಣ ಪಂಚಾಯಿತಿಗಳಿಗೆ ತಲಾ ಒಂದು ಲಕ್ಷ ಹಾಗೂ ಮಡಿಕೇರಿ ನಗರದ ಸಭೆಗೆ 2ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಿಪತ್ತಿನ ಸಮಯದಲ್ಲಿ ವಿಪತ್ತು ಸಂಭವಿಸಿದ ಪ್ರದೇಶದ ವ್ಯಾಪ್ತಿಯ ಗ್ರಾಮ ಪಂಚಾಯತಿಗಳು ಮತ್ತು ಪಟ್ಟಣ ಪಂಚಾಯತಿಗಳು ಪ್ರಥಮವಾಗಿ ಪರಿಹಾರ ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತವಾಗುವ ಸಂಸ್ಥೆಗಳಾಗಿರುವುದರಿಂದ ಅವುಗಳನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ. ತುರ್ತು ಸಮಯದಲ್ಲಿ ಕಾರ್ಯಪ್ರವೃತ್ತವಾಗುವಂತೆ ಮತ್ತು ಯಾವುದೇ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಈ ಸಂಸ್ಥೆಗಳು ಸನ್ನದ್ಧವಾಗಿರಬೇಕು ಎಂಬ ಕಾರಣಕ್ಕಾಗಿ ಜಿಲ್ಲೆಯ ಎಲ್ಲಾ ಹೋಬಳಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಅಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನೇಕ ಸುತ್ತಿನ ಸಭೆಗಳನ್ನು ನಡೆಸುವುದರ ಮೂಲಕ ಆ ಪಂಚಾಯತಿಯು ವಿಪತ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುವ ಬಗ್ಗೆ ಮತ್ತು ಆ ಪಂಚಾಯತಿ ವ್ಯಾಪ್ತಿಯ ವಿಪತ್ತು ಸೂಕ್ಷ್ಮ ಪ್ರದೇಶಗಳನ್ನು ಅಂದಾಜಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ 104 ಪಂಚಾಯತಿಗಳಿಗೆ ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ತಲಾ 50 ಸಾವಿರ ರೂ. ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರ ಕ್ರಿಯಾ ಯೋಜನೆಯನ್ನು ಕೊಡಗು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅನುಮೋದಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಾಗೆಯೇ ಕುಶಾಲನಗರ, ಸೋಮವಾರಪೇಟೆ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯತಿಗಳಿಗೆ ತುರ್ತು ವಿಪತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ತಲಾ ಒಂದು ಲಕ್ಷ ರೂ. ಮತ್ತು ಮಡಿಕೇರಿ ನಗರಸಭೆಗೆ 2ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss