ಕೊಡಗು: ಕೊರೋನಾ ಲಾಕ್ ಡೌನ್ ಜಾರಿಯಿಂದ ಜಿಲ್ಲೆಯ ಎಲ್ಲಾ ವರ್ಗದ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ಖಾಸಗಿ ಶಾಲೆಗಳು ಪ್ರಾಥಮಿಕ ಪೂರ್ವ ತರಗತಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಬೇಕೆಂದು ಜಾತ್ಯತೀತ ಜನತಾದಳದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲೀಲಾಶೇಷಮ್ಮ ಒತ್ತಾಯಿಸಿದ್ದಾರೆ.
ಈಗಾಗಲೇ ಕೆಲವು ಶಾಲೆಗಳು ಶುಲ್ಕ ಪಡೆಯದೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ನಿರ್ಧರಿಸಿರುವುದು ಸ್ವಾಗತಾರ್ಹ ಬೆಳೆವಣಿಗೆಯಾಗಿದೆ. ಇದೇ ಪ್ರಕಾರವಾಗಿ ಜಿಲ್ಲೆಯ ಎಲ್ಲಾ ಶಾಲೆಗಳು ಎಲ್ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಉಚಿತ ಪ್ರವೇಶ ಕಲ್ಪಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರವೇಶ ಶುಲ್ಕದಲ್ಲೂ ಶೇ 50 ರಷ್ಟು ವಿನಾಯಿತಿ ನೀಡಬೇಕೆಂದು ಒತ್ತಾಯಿಸಿರುವ ಅವರು, ಈ ಕ್ರಮದಿಂದ ಆಗುವ ನಷ್ಟವನ್ನು ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಪಡೆದುಕೊಳ್ಳಲಿ ಎಂದು ಹೇಳಿದ್ದಾರೆ. ದುಬಾರಿ ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ಮೇಲೆ ಶಿಕ್ಷಣ ಇಲಾಖೆ ನಿಗಾ ಇರಿಸಬೇಕೆಂದು ಲೀಲಾಶೇಷಮ್ಮ ತಿಳಿಸಿದ್ದಾರೆ.