Tuesday, June 28, 2022

Latest Posts

ಕೊಡಗು| ಫೆ.19-20ರಂದು ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

ಹೊಸದಿಗಂತ ವರದಿ, ಕೊಡಗು:

ಜಿಲ್ಲಾ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಫೆ.19ಮತ್ತು 20ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ರವಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸರಕಾರಿ ನೌಕರರು ಫೆ.19ರ ಬೆಳಗ್ಗೆ 8 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಿರಬೇಕು ಎಂದು ಅವರು ನುಡಿದರು.

ಕ್ರೀಡಾಕೂಟದಲ್ಲಿ ರಾಜ್ಯ ಸರಕಾರದ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿದ್ದು, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು, ದೈಹಿಕ ಶಿಕ್ಷಣ ನಿರ್ದೇಶಕರು, ಹಾಗೂ ಕ್ರೀಡಾಕೂಟದಡಿ ನೇಮಕಗೊಂಡ ನೌಕರರು ಭಾಗವಹಿಸುವಂತಿಲ್ಲ.ಅಲ್ಲದೆ ಪೊಲೀಸ್, ಅರಣ್ಯ ಇಲಾಖೆಗಳಲ್ಲಿ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಇಲಾಖೆಗಳ ಕಚೇರಿ ಮತ್ತು ಲಿಪಿಕ ನೌಕರರು, ಕಚೇರಿ ಸಿಬ್ಬಂದಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದಾಗಿ ತಿಳಿಸಿದರು.

ಕ್ರೀಡಾಕೂಟವನ್ನು ಫೆ.19ರ ಪೂರ್ವಾಹ್ನ 10.30ಗಂಟೆಗೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ವಿಣಾ ಅಚ್ಚಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದ ಸಂಘದ ಕ್ರೀಡಾ ಕಾರ್ಯದರ್ಶಿ ಪೊನ್ನಚನ ಶ್ರೀನಿವಾಸ್ ಅವರು, ಪುರುಷರ ವಿಭಾಗದ ಕ್ರೀಡಾ ಸ್ಪರ್ಧೆಗಳು 45 ವರ್ಷದ ಒಳಗಿನವರು ಹಾಗೂ 45 ವರ್ಷ ಮೇಲ್ಪಟ್ಟವರು ಮತ್ತು ಮಹಿಳೆಯರ ಕ್ರೀಡಾ ಸ್ಪರ್ಧೆಗಳು 40 ವರ್ಷದೊಳಗಿನವರು ಮತ್ತು 40 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ನಡೆಯಲಿರುವುದಾಗಿ ತಿಳಿಸಿದರು.

ಪುರುಷರಿಗಾಗಿ ಕ್ರೀಡಾವಿಭಾಗದಲ್ಲಿ ಫುಟ್ಬಾಲ್, ವಾಲಿಬಾಲ್, ಹಾಕಿ, ಕಬಡ್ಡಿ, ಟೇಬಲ್‍ಟೆನ್ನಿಸ್, ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕೇರಂ, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್‍ಮ ಬಾಸ್ಕೆಟ್‍ಬಾಲ್, ಚೆಸ್ ಟೆನಿಕಾಯ್ಟ್,ಥ್ರೋಬಾಲ್, ಮಹಿಳೆಯರಿಗೆ ಟೇಬಲ್ ಟೆನ್ನಿಸ್, ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕೇರಂ, ಬಾಲ್‍ಬ್ಯಾಡ್ಮಿಂಟನ್, ಚೆಸ್ ಟೆನ್ನಿಕಾಯ್ಟ್, ಥ್ರೋಬಾಲ್ ಸ್ಪರ್ಧೆಗಳು ನಡೆಯಲಿದ್ದು, 45 ವರ್ಷ ಮೇಲ್ಪಟ್ಟ ಪುರುಷರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೆನ್ನಿಸ್ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಟೇಬಲ್‍ಟೆನ್ನಿಸ್, ಬ್ಯಾಡ್ಮಿಂಟನ್, ಹಾಗೂ ಟೆನ್ನಿಸ್ ಸ್ಪರ್ಧೆಗಳು ಜರುಗಲಿರುವುದಾಗಿ ವಿವರಿಸಿದರು. ಇದರೊಂದಿಗೆ ಎಲ್ಲಾ ವಿಭಾಗದವರಿಗೂ ಈಜು, ಓಟದ ಸ್ಪರ್ಧೆಗಳೂ ಸೇರಿದಂತೆ ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿರುವುದಾಗಿ ನುಡಿದರು.

ಸಾಂಸ್ಕøತಿಕ ಸಮಿತಿ ಕಾರ್ಯದರ್ಶಿ ಡಿ.ಎಂ.ರೇವತಿ ಅವರು ಮಾತನಾಡಿ, ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಮಹಿಳೆಯರು ಹಾಗೂ ಪುರುಷರು ವಯಸ್ಸಿನ ನಿರ್ಬಂಧವಿಲ್ಲದೆ ಭಾಗವಹಿಸಬಹದಾಗಿದ್ದು, ಸಂಗೀತ ವಿಭಾಗದಲ್ಲಿ ಹಿಂದೂಸ್ಥಾನಿ, ಲಘುಶಾಸ್ತ್ರೀಯ, ಕರ್ನಾಟಕ ಶಾಸ್ತ್ರೀಯ, ಕರ್ನಾಟಕ ಲಘು ಶಾಸ್ತ್ರೀಯ, ಜಾನಪದ ಗೀತೆ( ವೈಯಕ್ತಿಕ ಹಾಗೂ ತಂಡ), ನೃತ್ಯ ವಿಭಾಗದಲ್ಲಿ ಕಥಕ್, ಮಣಿಪುರಿ, ಕೂಚುಪುಡಿ, ಕಥಕಳಿ, ಒಡಿಸ್ಸಿ, ಭರತನಾಟ್ಯ, ಜಾನಪದ ನೃತ್ಯ(ತಂಡ),ವಾದ್ಯ ಸಂಗೀತ ವಿಭಾಗದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ, ಲಘು ಶಾಸ್ತ್ರೀಯ, ಸ್ಟ್ರಿಂಗ್ ವಾದ್ಯಗಳು, ವಿಂಡ್ ವಾದ್ಯಗಳು-ಕರ್ನಾಟಕ ಶಾಸ್ತ್ರೀಯ ಹಾಗೂ ಲಘ ಶಾಸ್ತ್ರೀಯ, ಪರಕೇಷನ್ ವಾದ್ಯಗಳು, ಕರಕುಶಲ ವಸ್ತುಗಳ ಪ್ರದರ್ಶನ, ಕಿರುನಾಟಕ ಸ್ಪರ್ಧೆಗಳು ಇರುವುದಾಗಿ ವಿವರಿಸಿದರು.

ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಇಲಾಖಾ ಮುಖ್ಯಸ್ಥರಿಂದ ನೀಡಲಾದ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಸ್ಪರ್ಧೆಗಳು ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಸ್ಪರ್ಧಾ ಸ್ಥಳದಲ್ಲಿದ್ದು, ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಈಗಾಗಲೇ ಎಲ್ಲಾ ನೌಕರರಿಗೆ ಲಿಂಕ್ ಕಳುಹಿಸಲಾಗಿದ್ದು, ಅದರ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಪ್ರಮುಖರು ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಸ್‍ಟಿ.ಶಮ್ಮಿ, ಉಪಾಧ್ಯಕ್ಷ ಜಿ.ಎಂ.ಚಿನ್ನಯ್ಯ, ನಿರ್ದೇಶಕ ಕೆ.ಎಂ.ಪ್ರಕಾಶ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss