ಮಡಿಕೇರಿ: ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬುಧವಾರ ಸಂಜೆ ವೀರಾಜಪೇಟೆ ಸಮೀಪದ ಬಿಳುಗುಂದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸುರೇಶ್ (೪೦) ಎಂಬವರೇ ಕೊಲೆಯಾದವರಾಗಿದ್ದಾರೆ. ತನ್ನ ತಾಯಿಯೊಂದಿಗೆ ಜಗಳವಾಡಿದ ಎಂಬ ಕಾರಣಕ್ಕೆ ಸೋದರ ಸಂಬಂಧಿ ಕುಮಾರ್ ಎಂಬಾತ ಸುರೇಶ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಹೇಳಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ಕುಶಾಲನಗರ: ಇಲ್ಲಿಗೆ ಸಮೀಪದ ಕಣಿವೆಯಲ್ಲಿರುವ ತೂಗು ಸೇತುವೆಯ ಮೇಲಿಂದ ಕಾವೇರಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಣಿವೆ ಸಮೀಪದ ಭುವನಗಿರಿ ಗ್ರಾಮದ ಬಸವಯ್ಯ ( ೬೫) ಎಂಬವರು ಕಣಿವೆಯ ತೂಗು ಸೇತುವೆ ಹತ್ತಿರ ಬಂದು ತನ್ನ ಬಟ್ಟೆಯನ್ನು ಕಳಚಿ ಸೇತುವೆಯ ಮಧ್ಯ ಭಾಗದಿಂದ ಕಾವೇರಿ ನದಿಗೆ ಹಾರಿದ್ದಾರೆ.
ಸಂಜೆ ಅವರ ಮೃತ ದೇಹ ಪತ್ತೆಯಾಗಿದೆ. ಮೃತರು ಹೆಂಡತಿ ಮತ್ತು ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.