ಕೊಡಗು: ಕೊರೋನಾ ಸೇರಿದಂತೆ ವೈರಾಣುಗಳಿಂದ ಹರಡುವ ರೋಗಗಳನ್ನು ಪತ್ತೆ ಮಾಡಬಹುದಾದ ಪ್ರಯೋಗಾಲಯ ಕೊನೆಗೂ ಕೊಡಗಿನಲ್ಲಿ ಆರಂಭವಾಗಲಿದೆ.
ಕೊಡಗು ಜಿಲ್ಲೆಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದಲ್ಲಿ 1.06 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಪ್ರಯೋಗಾಲಯವನ್ನು ಶುಕ್ರವಾರ ರಾಜ್ಯದ ವಸತಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ವಿಪತ್ತು ನಿಧಿಯಡಿ ಈ ಕೋವಿಡ್ ಪರೀಕ್ಷೆಯ ಪ್ರಯೋಗಾಲಯ ಸಿದ್ಧಗೊಂಡಿದ್ದು, ಈ ಪ್ರಯೋಗಾಲಯದಲ್ಲಿ ಒಂದು ಬಾರಿಗೆ 100 ಮೂಗು/ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ.
ಇಲ್ಲಿಯವರೆಗೆ ಕೊಡಗು ಜಿಲ್ಲೆಯಿಂದ ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿತ ಮಾದರಿಗಳನ್ನು ಮೈಸೂರಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗುತ್ತಿತ್ತು. ಮತ್ತು ವರದಿಗಾಗಿ ಎರಡು ದಿನ ಕಾಯಬೇಕಾಗಿತ್ತು. ಇನ್ನು ಮುಂದೆ ಕೋವಿಡ್ ಪರೀಕ್ಷಾ ಸೌಲಭ್ಯ ಜಿಲ್ಲೆಯಲ್ಲಿಯೇ ಲಭ್ಯವಾಗಲಿದ್ದು, ಮುಂದಿನ ಒಂದು ವಾರದಲ್ಲಿ ಪೂರ್ಣ ಪ್ರಮಾಣದ ಪರೀಕ್ಷೆಯು ಈ ಪ್ರಯೋಗಾಲಯದಲ್ಲಿ ಪ್ರಾರಂಭವಾಗಲಿದೆ.
ಭವಿಷ್ಯದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಅನುಮತಿ ಪಡೆದು ಈ ಪ್ರಯೋಗಾಲಯವನ್ನು ಇತರೆ ವೈರಾಣುಗಳಿಂದ ಹರಡುವ ರೋಗಗಳ ಪರೀಕ್ಷೆಗೂ ಬಳಸಬಹುದಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.