Tuesday, June 28, 2022

Latest Posts

ಕೊಡಗು| ಮೂರು ಪಟ್ಟಣ ಪಂಚಾಯತ್‍ಗಳಲ್ಲೂ ಅರಳಿದ ಕಮಲ

ಮಡಿಕೇರಿ: ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮೂರು ಪಂಚಾಯತ್‍ಗಳ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಕುಶಾಲನಗರ ಹಾಗೂ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯತ್ ಚುನಾವಣೆ ನಡೆದು ಎರಡು ವರ್ಷಗಳಾಗಿದ್ದರೂ, ಮೀಸಲಾತಿ ಗೊಂದಲದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿ ಸರಕಾರ ಈ ಹಿಂದೆ ನಿಗದಿಪಡಿಸಿದ ಮೀಸಲಾತಿಯ ಅನ್ವಯ ಚುನಾವಣೆ ನಡೆಸುವಂತೆ ಸೂಚಿಸಿದ ಮೇರೆಗೆ ಮಂಗಳವಾರ ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳಲ್ಲೂ ಚುನಾವಣೆ ನಡೆಯಿಯಿತು.
ಕುಶಾಲನಗರ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾಗಿ ಬಿಜೆಪಿಯ ಜಯವರ್ಧನ್(ಕೇಶವ್) ಅವರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜೆಡಿಎಸ್‍ನ ಸುರಯ್ಯಭಾನು ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿತ್ತು.
ಪಂಚಾಯತ್‍ನ ಒಟ್ಟು 13 ಮಂದಿ ಚುನಾಯಿತ ಸದಸ್ಯರ ಪೈಕಿ ಬಿಜೆಪಿ 6, ಕಾಂಗ್ರೆಸ್ 4 ಹಾಗೂ ಜೆಡಿಎಸ್ 3 ಸದಸ್ಯರನ್ನು ಹೊಂದಿದ್ದು, ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದರೊಂದಿಗೆ ಉಪಾಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಚುನಾವಣೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಸಂಸದ ಪ್ರತಾಪ್‍ಸಿಂಹ ಅವರುಗಳು ಬಿಜೆಪಿ ಪರ ಮತ ಚಲಾಯಿಸುವ ಮೂಲಕ ಬಿಜೆಪಿಯ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾಗಿ ಬಿಜೆಪಿಯ ಟಿ.ಆರ್.ಸುಶ್ಮಿತಾ ಹಾಗೂ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಹರ್ಷವರ್ಧನ್ ಆಯ್ಕೆಯಾಗಿದ್ದಾರೆ,
ಪಂಚಾಯತ್‍ನ ಒಟ್ಟು 18 ಚುನಾಯಿತ ಸದಸ್ಯರ ಪೈಕಿ ಬಿಜೆಪಿ 8 , ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರ ಮೂರು ಮಂದಿ ಇದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಶ್ಮಿತಾ ಮಾತ್ರ ಅರ್ಹರಾಗಿರುವುದರಿಂದ ಬಿಜೆಪಿಯ 8 ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಂಸದ ಪ್ರತಾಪ್‍ಸಿಂಹ ಅವರ ಎರಡು ಮತಗಳ ಸಹಕಾರದಿಂದ 10 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಅಗಸ್ಟಿನ್ ಹಾಗೂ ಹರ್ಷವರ್ಧನ್ ಅವರುಗಳು ತಲಾ 10 ಮತಗಳನ್ನು ಪಡೆದು ಸಮಬಲ ಸಾಧಿಸಿದರೆ, ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರು ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಸಂದರ್ಭ ಹರ್ಷವರ್ಧನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರ ಮೈತ್ರಿ ಕೂಟ ಮುಖಭಂಗ ಅನುಭವಿಸುವಂತಾಯಿತು.
ಅತ್ತ ಸೋಮವಾರಪೇಟೆ ಪಟ್ಟಣ ಪಂಚಾಯತ್‍ನಲ್ಲೂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಳಿನಿ ಗಣೇಶ್ ಮೀಸಲಾತಿಯಡಿ ಆಯ್ಕೆಯಾಗುವುದು ಖಚಿತವಾಗಿದ್ದು, ಉಪಾಧ್ಯಕ್ಷರ ಆಯ್ಕೆ ಮಾತ್ರ ಅಪರಾಹ್ನ ನಡೆಯುವ ಚುನಾವಣೆಯ ಮೂಲಕ ಆಗಬೇಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss