ಕೊಡಗು: ದೇಶ ವಿದೇಶದಲ್ಲಿ ಕೊರೋನಾ ಸೋಂಕಿತರು ಅಧಿಕವಾಗುತ್ತಿದ್ದಂತೆ, ದೇಶವೇ ಲಾಕ್ಡೌನ್ ಆದಾಗ ಮೊದಲು ತೊಂದರೆಗೊಳಗಾದವರು ರೈತರು ಮತ್ತು ಕಾರ್ಮಿಕರು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನಿಗದಿತ ದರ ಲಭ್ಯವಾಗದಿದ್ದಾಗ ಫಸಲನ್ನು ನೆಲಕ್ಕೆ ಚೆಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡುವ ಮೂಲಕ ರೈತರು ತಮ್ಮ ನೋವನ್ನು ಪ್ರಕಟಿಸಿದ್ದಾರೆ.ಇದರಿಂದ ಪ್ರತಿಯೊಬ್ಬ ರೈತ 2-10 ಲಕ್ಷದವರಗೆ ನಷ್ಟ ಅನುಭವಿಸಿದ್ದು, ಇದನ್ನು ಸರಕಾರ ಭರಿಸುವ ನಂಬಿಕೆ ಇಲ್ಲ ಎಂದು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕರ ರಕ್ಷಣಾ ವೇದಿಕೆಯ ಅಧ್ಯಕ್ಷ ಜೆ.ಜವರೇಗೌಡ ಕಳವಳ ವ್ಯಕ್ತಪಡಿಸಿದರು.
ಬಿಟ್ಟಂಗಾಲ ಗ್ರಾ.ಪಂ.ವ್ಯಾಪ್ತಿಯ ಪೆಗ್ಗರೆ ಕಾಡುವಿನಲ್ಲಿ ಕಾರ್ಮಿಕರು, ಬಿಎಸ್ಎನ್ಎಲ್ ಗುತ್ತಿಗೆ ನೌಕರರು ಹಾಗೂ ರೈತಾಪಿ ವರ್ಗವನ್ನುದ್ದೇಶಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಇದೀಗ ಸಂಘಟನೆಯ ಸದಸ್ಯತ್ವ ಆಂದೋಲನವನ್ನು ಆರಂಭಿಸಿದ್ದು, ಸದಸ್ಯರಾದವರಿಗೆ ಗುರುತಿನ ಚೀಟಿ ಹಾಗೂ ಕಾರ್ಮಿಕ ಇಲಾಖೆಯ ಕಾರ್ಡ್ ಮಾಡಿಸಿಕೊಡಲಾಗುವುದು.
ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತು ಪಡೆಯಲು, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವೇದಿಕೆ ನೆರವು ನೀಡುತ್ತದೆ ಎಂದು ಹೇಳಿದರು. ಕಾರ್ಮಿಕರ ಗೃಹ ನಿರ್ಮಾಣ, ವೈದ್ಯಕೀಯ ಹಾಗೂ ಆರೋಗ್ಯದ ವಿಚಾರವಾಗಿಯೂ ವೇದಿಕೆ ಹೋರಾಟ ಮಾಡಲಿದೆ ಎಂದ ಅವರು, ಕೇಂದ್ರ ಸರ್ಕಾರ ಕೊರೋನಾ ನಂತರ ಸುಮಾರು ರೂ.20 ಲಕ್ಷ ಕೋಟಿಯ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ ಎಂದರು.
ಬಿಎಸ್ಎನ್ಎಲ್ ಗುತ್ತಿಗೆ ಆಧಾರದ ನೌಕರರಿಗೆ ಕಳೆದ 10 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಈ ಬಗ್ಗೆಯೂ ಸಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವದು ಇಲ್ಲವೇ ನೌಕರರ ಪರವಾಗಿ ಹೋರಾಟ ಕೈಗೊಳ್ಳಲಾಗುವದು ಎಂದ ಅವರು, ದೇಶದಾದ್ಯಂತ ಸುಮಾರು ರೂ.60 ಕೋಟಿಗೂ ಅಧಿಕ ವೇತನ ಪಾವತಿಯನ್ನು ಬಿಎಸ್ಎನ್ಎಲ್ ಉಳಿಸಿಕೊಂಡಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಮಧು ಅವರು ಮಾತನಾಡಿ, ಕರ್ನಾಟಕದಲ್ಲಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಕೇರಳ ಮಾದರಿ ಹೋರಾಟ ಅಗತ್ಯ. ಬ್ಯಾಂಕ್ ಇತ್ಯಾದಿಗಳಿಂದ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಲಾಭವಿಲ್ಲ. ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿ ದರದಲ್ಲಿ ಹಣವನ್ನು ಹೊಂದಿಕೊಂಡ ಸಣ್ಣ ಹಿಡುವಳಿದಾರ ರೈತರು ಹಾಗೂ ಕಾರ್ಮಿಕರು ನಿರಂತರ ಶೋಷಣೆಯೊಂದಿಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಾರ್ಮಿಕರು ಸಾಲದಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿಯೂ ವೇದಿಕೆ ಪ್ರಾಮಾಣಿಕ ಹೋರಾಟ ನಡೆಸಲಿದೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದೇವರಾಜು ಅವರು, ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ನಿವೇಶನ ಹಂಚುವದು ಹಾಗೂ ಸ್ವಂತ ಗೃಹ ನಿರ್ಮಾಣ ಮಾಡಿಕೊಳ್ಳಲು ಸಾಲ ಸೌಲಭ್ಯ ಹಾಗೂ ಸರ್ಕಾರದ ಅನುದಾನ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಕೊಡಗು ಲಾಕಡೌನ್ ಸಂದರ್ಭ ಸಂಘದ ವತಿಯಿಂದ ಜಿಲ್ಲೆಯ ಆದಿವಾಸಿಗಳು, ಬಡವರ್ಗದ ಕಾಲೋನಿಗಳಿಗೆ ಉಚಿತವಾಗಿ ತರಕಾರಿ ವಿತರಿಸಲಾಗಿತ್ತು. ಇದೊಂದು ಅಳಿಲ ಸೇವೆಯಾಗಿದ್ದು ಮುಂದೆ ಎಲ್ಲಾ ಕಾರ್ಮಿಕರಿಗೂ ಸೂರು ಕಟ್ಟಿಕೊಡುವ ನಿಟ್ಟಿನಲ್ಲಿ ಸಹಕರಿಸಲಿರುವುದಾಗಿ ನುಡಿದರು.
ಪ್ರತಿಯೊಬ್ಬರೂ ಕಾರ್ಮಿಕ ಇಲಾಖೆಯ ಕಾರ್ಡ್ ಹೊಂದುವದು ಅಗತ್ಯ. ಜಲಪ್ರಳಯದ ನಂತರ ಕೊಡಗಿನ ಜನತೆ, ಕಾರ್ಮಿಕ ವರ್ಗ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರದಲ್ಲಿ ವೇದಿಕೆಯ ಉತ್ತಮ ಕಾರ್ಯಕ್ರಮದ ಬಗ್ಗೆ ತಿಳಿದು ಕೊಡಗು ಜಿಲ್ಲೆಯ ವೇದಿಕೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಮುಂದಾಗಿರುವುದಾಗಿ ಅವರು ಹೇಳಿದರು.
ಕೊಡಗಿನ ಕಾರ್ಮಿಕರು ಮತ್ತು ಸಂತ್ರಸ್ತರಿಗೆ ಸಾಧ್ಯವಾದಷ್ಟು ಉತ್ತಮ ಕಾರ್ಯಕ್ರಮ ಹಾಕಿಕೊಳ್ಳಲಾಗುವುದೆಂದು ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ತಿಳಿಸಿದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಅವರು ಇದೇ ಸಂದರ್ಭ ಕೊರೋನಾ ವಿರುದ್ಧ ನಿರಂತರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ನುಡಿದರು.
ಸಭೆಯಲ್ಲಿ ಮೈಸೂರು ಜಿಲ್ಲಾ ವೇದಿಕೆಯ ಕಾರ್ಯದರ್ಶಿ ಎಂ.ತಿಮ್ಮಯ್ಯ, ಬಿಎಸ್ಎನ್ಎಲ್ ನೌಕರರ ಪರವಾಗಿ ರೀನಾ ಮಾತನಾಡಿದರು.
ಇದೇ ಸಂದರ್ಭ ವೀರಾಜಪೇಟೆ ತಾಲೂಕು ರೈತ ಹಾಗೂ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷರನ್ನಾಗಿ ಬಿಟ್ಟಂಗಾಲದ ಟಿ.ಎ.ಪ್ರದೀಪ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಎಸ್ಎನ್ಎಲ್ ಗುತ್ತಿಗೆ ನೌಕರರ ವೇತನ ವಿಳಂಬ, ಮೀಟರ್ ಬಡ್ಡಿ ದಂಧೆ, ಕಾರ್ಮಿಕರ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಪಡಿಕ್ಕಲ್ ಕುಸುಮಾವತಿ ಪ್ರಾರ್ಥಿಸಿದರೆ, ಮೈಸೂರಿನ ಎಂ.ತಮ್ಮಯ್ಯ ಸ್ವಾಗತಿಸಿದರು.