ಮಡಿಕೇರಿ: ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ನೂತನ ಗರ್ಭಗುಡಿ ಸ್ಥಾಪನೆಗಾಗಿ ಸಿದ್ಧಗೊಂಡ ಶಿಲೆಗಳನ್ನು ತರಲಾಯಿತು.
ಸನ್ನಿಧಿಯ ನಿರ್ಮಾಣದೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ಶನಿವಾರ ಉಪ್ಪಿನಂಗಡಿಯಿಂದ ಕೆತ್ತನೆಗೊಂಡ ಶಿಲೆಗಳನ್ನು ತರಲಾಯಿತು. ಈ ಶಿಲೆಗಳೊಂದಿಗೆ ಬಾಲಾಲಯದಲ್ಲಿರುವ ಶ್ರೀ ರಾಮ ಪರಿವಾರ ಮತ್ತು ಮಹಾ ಗಣಪತಿಗೆ ವಿಶೇಷ ಪೂಜೆ ಬಳಿಕೆ ಶಿಲ್ಪಿ ವಿಜಯ್ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಎರಡು ಲಾರಿಗಳಲ್ಲಿ ಉಪ್ಪಿನಂಗಡಿಯಿಂದ ಕೆತ್ತನೆಯ ಶಿಲೆಗಳು ಆಗಮಿಸುತ್ತಿದ್ದಂತೆಯೇ, ಶ್ರೀ ಕೋದಂಡ ರಾಮ ದೇವಾಲಯ ವಿಶ್ವಸ್ಥ ಸಮಿತಿ, ಶ್ರೀ ರಾಮೋತ್ಸವ ಸಮಿತಿ ಹಾಗೂ ಜ್ಯೋತಿ ಯುವಕ ಸಂಘ ಸಹಿತ ಎಲ್ಲಾ ಪ್ರಮುಖರು, ಸದ್ಭಕ್ತರ ಬಳಗ ಶಿಲೆಗಳನ್ನು ಬರಮಾಡಿಕೊಂಡರು.
ನಗರದ ಜನರಲ್ ತಿಮ್ಮಯ್ಯ ವೃತ್ತ, ಚಿಕ್ಕಪೇಟೆ, ಹಳೆಯ ಬಸ್ ನಿಲ್ದಾಣ, ಕಾಲೇಜು ರಸ್ತೆ, ರಾಣಿಪೇಟೆ ಮಾರ್ಗವಾಗಿ ಶಿಲೆಗಳನ್ನು ಹೊತ್ತ ಲಾರಿಗಳು ಸಾಗುತ್ತಿದ್ದಂತೆಯೇ, ಮಲ್ಲಿಕಾರ್ಜುನ ನಗರದ ಯುವಕರು ಮತ್ತು ಸಮಿತಿ ಪ್ರಮುಖರು ಓಂಕಾರ ಧ್ವಜ ಸಹಿತ ಉದ್ಘೋಷಗಳೊಂದಿಗೆ ದೇವಾಲಯ ಸನ್ನಿಧಿಗೆ ಬರಮಾಡಿಕೊಂಡು, ಹರ್ಷೋದ್ಗಾರಗೈದರು.
ಬಳಿಕ ಸನ್ನಿಧಿಯ ಅರ್ಚಕರು, ಪದಾಧಿಕಾರಿಗಳು, ಸದ್ಭಕ್ತರು ವಿಶೇಷ ಪ್ರಾರ್ಥನೆಯೊಂದಿಗೆ ಆದಷ್ಟು ಬೇಗನೆ ದೇವಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡು, ನಾಡಿಗೆ, ರಾಷ್ಟ್ರಕ್ಕೆ, ಲೋಕಕ್ಕೆ ಶ್ರೀ ಕೋದಂಡ ರಾಮ, ಪರಿವಾರ ದೇವತೆಗಳ ಅನುಗ್ರಹದಿಂದ ಸನ್ಮಂಗಲ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು.
ಅಂದಾಜು ರೂ. 1 ಕೋಟಿಗೂ ಅಧಿಕ ವೆಚ್ಚದೊಂದಿಗೆ ರೂಪುಗೊಳ್ಳುತ್ತಿರುವ ದೇವಾಲಯ ನಿರ್ಮಾಣ ಕಾರ್ಯಕ್ಕೆ ಈ ವೇಳೆ ಶಿಲ್ಪಿಗಳು ಚಾಲನೆ ನೀಡಿದರು. ಶುಕ್ರವಾರದಿಂದಲೇ ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಯುವಕರ ತಂಡ ಲಾರಿಯಿಂದ ಶಿಲೆಗಳನ್ನು ದೇವಾಲಯ ಆವರಣದಲ್ಲಿ ಇಳಿಸುವಲ್ಲಿ ಶ್ರಮಿಸಿತು.
ಕಳೆದ ಏಪ್ರಿಲ್ನಲ್ಲಿ ಶ್ರೀ ಕೋದಂಡ ರಾಮನಿಗೆ ಶಿಲಾ ಗುಡಿ ನಿರ್ಮಾಣದ ಆಶಯ ಹೊಂದಿದ್ದರೂ, ಜಾಗತಿಕ ಕೊರೋನಾ ಸೋಂಕು ಆತಂಕ ಮತ್ತು ಮಳೆಯ ನಡುವೆ ಮಂಗಳೂರು ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧದಿಂದ ಈ ಶಿಲೆಗಳ ಆಗಮನ ವಿಳಂಬವಾಗಿತ್ತು.