Wednesday, July 6, 2022

Latest Posts

ಕೊಡಗು| ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ ಸಾಧನೆ ಬಿಂಬಿಸಲು ಹೊರಟಿರುವುದು ಹಾಸ್ಯಾಸ್ಪದ: ಕಾಂಗ್ರೆಸ್ ಕಿಸಾನ್ ಘಟಕ ಟೀಕೆ

ಮಡಿಕೇರಿ: ಕೃಷಿ ಕ್ಷೇತ್ರವೂ ಸೇರಿದಂತೆ ದೇಶದ ಹಲವು ಕ್ಷೇತ್ರಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿರುವ ಬಿಜೆಪಿ ಇದೀಗ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸಲು ಹೊರಟಿರುವುದು ಹಾಸ್ಯಾಸ್ಪದವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಮೋದಿಯವರ ಆಪ್ತರಾಗಿರುವ ಅದಾನಿ ಕುಟುಂಬಕ್ಕೆ ಹಾಗೂ ಇತರೆ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಕೇಂದ್ರ ಮುಂದಾಗಿದ್ದು, ಇದರ ವಿರುದ್ಧ ಕಿಸಾನ್ ರಾಜ್ಯ ಕಿಸಾನ್ ಘಟಕವು ತೀವ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವ ಹೊಣೆಯನ್ನು ಖಾಸಗಿ ಕಂಪೆನಿಗಳಿಗೆ ಸರ್ಕಾರ ನೀಡಿದೆ. ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಈ ಕಾಯ್ದೆ ಮತ್ತಷ್ಟು ತೊಂದರೆಗೆ ಸಿಲುಕಿಸಲಿದೆಯೆಂದು ದೂರಿದರು.
ಫಸಲು ಸಾಲ ಮರುಪಾವತಿಯ ಅವಧಿಯನ್ನು ಸರ್ಕಾರ ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಿದೆ. ಆದರೆ, ಕಳೆÉದ ಎರಡು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿದ್ದ ಕೊಡಗಿನ ರೈತರು ಇದೀಗ ಕೋವಿಡ್ 19 ಲಾಕ್ ಡೌನ್‍ನಿಂದಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ನಷ್ಟ ಅನುಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಸಾಲ ಮರುಪಾವತಿಸುವಂತೆ ಸರ್ಕಾರ ಸೂಚಿಸಿರುವುದು ಅವೈಜ್ಞಾನಿಕ ಎಂದು ಉಮೇಶ್ ಆರೋಪಿಸಿದರು.
ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‍ನಿಂದ ಕೊಡಗಿನ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಟ ಈ ಪ್ಯಾಕೇಜಿನಿಂದ ರೈತರ ಸಾಲ ಮನ್ನಾ ಆಗಬಹುದೆನ್ನುವ ನಿರೀಕ್ಷೆಯೂ ಹುಸಿಯಾಗಿದೆ ಎಂದು ದೂರಿದ ಅವರು, ರೈತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರುತ್ತಿಲ್ಲ. ರೈತರ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕೆನ್ನುವುದೇ ಪ್ರಶ್ನೆಯಾಗಿ ಉಳಿದಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಬಡ್ಡಿ ದರ ಹೆಚ್ಚಳ: ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರೈತರಿಗೆ ಶೇ. 4 ರಿಂದ 5 ಬಡ್ಡಿದರದಲ್ಲಿ ಚಿನ್ನಾಭರಣ ಅಡಮಾನ ಸಾಲವನ್ನು ಒದಗಿಸಲಾಗುತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಬಡ್ಡಿ ದರವನ್ನು ಶೇ.9 ಕ್ಕೆ ಏರಿಸಿದೆ. ಕೇಂದ್ರ ಸರ್ಕಾರ ಘೋಷಿಸಿದ ಕಿಸಾನ್ ಸಮ್ಮಾನ್ ಯೋಜನೆಯ ಲಾಭವೂ ಹೆಚ್ಚಿನ ರೈತರಿಗೆ ದೊರಕದಂತಾಗಿದೆ ಎಂದು ಅವರು ನುಡಿದರು.
ಕೊರೋನಾ ಲಾಕ್ ಡೌನ್‍ನಿಂದಾಗಿ ದೇಶದಲ್ಲಿ ಸುಮಾರು 40 ಕೊಟಿ ಜನ ಉದ್ಯೋಗ ಹಾಗೂ ಆಹಾರವಿಲ್ಲದೆ ಬೀದಿಗೆ ಬಂದಿದ್ದಾರೆ. ಗರೀಬ್ ಕಲ್ಯಾಣ ಯೋಜನೆಯಡಿ 2011ರ ಜನಗಣತಿಯ ಆಧಾರದಲ್ಲಿ 70 ಕೋಟಿ ಜನರಿಗೆ ಎರಡು ತಿಂಗಳ ಪಡಿತರವನ್ನು ಮುಂಚಿತವಾಗಿ ನೀಡುವುದಾಗಿ ಘೋಷಿಸಲಾಗಿದೆ. ಆದರೆ, ಈ ಮಾನದಂಡದಿಂದಾಗಿ ಸುಮಾರು 20 ಕೋಟಿಗೂ ಹೆಚ್ಚಿನ ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆಂದು ಅಭಿಪ್ರಾಯಿಸಿದರು.
ಆತ್ಮಹತ್ಯೆ ಪ್ರಕರಣ ಹೆಚ್ಚಳ: ತಾವು ಅಧಿಕಾರಕ್ಕೆ ಬಂದಲ್ಲಿ ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ಬಿಜೆಪಿ ಚುನಾವಣಾ ಪೂರ್ವದಲ್ಲಿ ಘೋಷಿಸಿತ್ತು. ಆದರೆ, ಕಳೆದ ಆರು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಪರಿಣಾಮವಾಗಿ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಧಿಕ ಗೊಳ್ಳುತ್ತಿದೆ ಎಂದರು.
ಯುವಜನರ ವಲಸೆ: ಸರ್ಕಾರದ ನೀತಿಗಳಿಂದಾಗಿ ಇಂದು ಗ್ರಾಮೀಣ ಪ್ರದೇಶದ ಯುವಜನರು ಕೃಷಿಯಿಂದ ವಿಮುಖರಾಗಿ ನಗರದತ್ತ ವಲಸೆ ಹೋಗುತ್ತಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶದ ಆಹಾರ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟ ನೆರವಂಡ ಉಮೇಶ್ ಅವರು, ಕೊಡಗಿನಲ್ಲಿ ಹಲವು ಮಂದಿ ಹೋಂ ಸ್ಟೇಗಳನ್ನು ಅವಲಂಬಿಸಿ ಜೀವನವನ್ನು ಕಂಡುಕೊಂಡಿದ್ದು, ಪ್ರಸಕ್ತ ಲಾಕ್ ಡೌನ್ ಸಡಿಲಗೊಂಡಿರುವುದರಿಂದ ಹೋಂ ಸ್ಟೇಗಳನ್ನು ಆರಂಭಿಸುವುದು ಸೂಕ್ತ. ಇದರಿಂದ ಅದನ್ನೇ ನೆಚ್ಚಿಕೊಂಡಿರುವ ರೈತರ ಹಾಗೂ ರೈತರ ಮಕ್ಕಳ ಬದುಕು ಹಸನಾಗಲಿದೆ ಎಂದು ನುಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಾಲೆಗಳನ್ನು ಪುನರಾರಂಭಿಸಲು ತುದಿಗಾಲಲ್ಲಿ ನಿಂತಿವೆ. ಬಹುತೇಕ ಎಲ್ಲಾ ಪಕ್ಷಗಳ ರಾಜಕಾರಣಿಗಳು ಒಂದಿಲ್ಲ ಒಂದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪಾಲುದಾರರಾಗಿದ್ದು, ಅವರ ಹಣದ ಆಸೆಗೆ ಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಇದರೊಂದಿಗೆ ಶಿಕ್ಷಣ ವ್ಯವಸ್ಥೆ ಉಳ್ಳವರಿಗೊಂದು, ಇಲ್ಲದವರಿಗೊಂದು ಎನ್ನುವಂತಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ದುಡಿಯುವ ಶಿಕ್ಷಕರ ಮಕ್ಕಳೆ ಇಂದು ಖಾಸಗಿ ಶಾಲೆಗಳಲ್ಲಿ ಓದುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದು ವಿಷಾದಿಸಿದರು.
ಗೋಷ್ಠಿಯಲ್ಲಿ ಕಿಸಾನ್ ಘಟಕದ ರಾಜ್ಯ ಪದಾಧಿಕಾರಿ ಕೆ.ಎಸ್. ಗೋಪಾಲಕೃಷ್ಣ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ. ತೀರ್ಥ ಪ್ರಸಾದ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಚೇರಂಡ ಮೋಹನ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಸವರಾಜು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss