Thursday, August 18, 2022

Latest Posts

ಕೊಡಗು | ಸಾಲ ಮನ್ನಾದ ಬಾಕಿ ಬಿಡುಗಡೆ ಮಾಡಿಸಲು ಶೀಘ್ರ ಕ್ರಮ: ಶಾಸಕ ಕೆ.ಜಿ.ಬೋಪಯ್ಯ

ಪೊನ್ನಂಪೇಟೆ: ಸರಕಾರ ನೀಡಿರುವ ಬೆಳೆಗಾರರ ಸಾಲ ಮನ್ನಾದ ಸೌಲಭ್ಯದಿಂದ ಕೆಲವು ಬೆಳೆಗಾರರು ವಂಚಿತರಾಗಿದ್ದು, ಇದನ್ನು ಸರಕಾರದ ಮಟ್ಟದಲ್ಲಿ ಇತ್ಯರ್ಥ ಪಡಿಸಲು ಮತ್ತು ಸಾಲ ಮನ್ನಾ ಸೌಲಭ್ಯದ ಬಾಕಿ ಹಣವಾದ 10 ಕೋಟಿ ರೂ.ಗಳನ್ನು ಸರಕಾರದಿಂದ ಡಿ.ಸಿ.ಸಿ. ಬ್ಯಾಂಕಿಗೆ ಬಿಡುಗಡೆ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.
ಇಲ್ಲಿಗೆ ಸಮೀಪದ ಟಿ.ಶೆಟ್ಟಿಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 19ನೇ ಶಾಖೆಯನ್ನು ಉದ್ಘಾಟಿಸಿ, ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್‌ನಿಂದ ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಸರಕಾರಿ ನೌಕರರಿಗೆ ವೇತನ ನೀಡಲು ಸಹ ಹಣದ ಅಭಾವ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ರೂ. 33 ಸಾವಿರ ಕೋಟಿ ಹಣವನ್ನು ಸಾಲವಾಗಿ ಪಡೆಯಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು, 1921ರಲ್ಲಿ ಮಡಿಕೇರಿಯಲ್ಲಿ ಡಿ.ಸಿ.ಸಿ. ಬ್ಯಾಂಕ್ ರಾವ್‌ಬಹದ್ದೂರ್ ಕೊಡಂದೇರ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿದ್ದು, ಡಿ.ಸಿ.ಸಿ. ಬ್ಯಾಂಕಿಗೆ 99 ವರ್ಷದ ಇತಿಹಾಸವಿದೆ.
2021ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ.ಸಿ.ಸಿ. ಬ್ಯಾಂಕ್ ಇದರ ನೆನಪಿಗೆ ಮಡಿಕೇರಿಯಲ್ಲಿ ತನ್ನ ಸ್ವಂತ ಬಂಡವಾಳದಿಂದ 10 ಕೋಟಿ ವೆಚ್ಚದಲ್ಲಿ 5 ಅಂತಸ್ತಿನ ಕಚೇರಿ ನಿರ್ಮಿಸಲು ಯೋಜನೆ ರೂಪಿಸಿದೆ. ಕಳೆದ 6 ವರ್ಷದಿಂದ 9 ಶಾಖೆಯನ್ನು ಜಿಲ್ಲೆಯ ವಿವಿಧೆಡೆ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ 1.25 ಲಕ್ಷ ಗ್ರಾಹಕರನ್ನು ಹೊಂದಿದ್ದು, ಉಳಿದ ಶಾಖೆಗಳನ್ನು ತೆರೆದ ನಂತರ ಗ್ರಾಹಕರ ಸಂಖ್ಯೆ 1.50 ಲಕ್ಷಕ್ಕೆ ತಲುಪಲಿದೆ ಎಂದು ಹೇಳಿದರು.
ಈಗಾಗಲೇ ಉತ್ತರ ಕೊಡಗಿನ ಹೆಬ್ಬಾಲೆ ಮತ್ತು ಟಿ.ಶೆಟ್ಟಿಗೇರಿಯಲ್ಲಿ ಶಾಖೆ ಉದ್ಘಾಟನೆ ಮಾಡಲಾಗಿದೆ. ಬಾಳೆಲೆಯಲ್ಲಿ 26ನೇ ತಾರೀಖಿನಂದು ಡಿ.ಸಿ.ಸಿ ಬ್ಯಾಂಕಿನ 20ನೇ ಶಾಖೆಯನ್ನು ಉದ್ಘಾಟನೆ ಮಾಡಲಾಗುವುದು. ಕೊಡ್ಲಿಪೇಟೆಯಲ್ಲಿ 21ನೇ ಶಾಖೆ, 22 ಮತ್ತು 23ನೇ ಶಾಖೆ ಸಂಪಾಜೆ ಮತ್ತು ಮಾದಾಪುರದಲ್ಲಿ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.
ಸಕಾಲದಲ್ಲಿ ಸಾಲ ಮರುಪಾವತಿಸಿ: ಸಾಲ ವಸೂಲಾತಿಗೆ ಡಿ.ಸಿ.ಸಿ ಬ್ಯಾಂಕಿನಿಂದ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಇವೆ. ಆದರೆ ಬ್ಯಾಂಕ್ ಸಾಲ ನೀಡುವಾಗ ತೋರುವ ಬದ್ಧತೆಯನ್ನು ವಸೂಲಾತಿಯ ಸಂದರ್ಭದಲ್ಲಿಯೂ ತೋರಬೇಕಾಗುತ್ತದೆ. ನಬಾರ್ಡ್‌ನಿಂದ ಸಾಲ ಪಡೆದು ಸದಸ್ಯರಿಗೆ ನೀಡುತ್ತಿದ್ದು, ಅವರಿಗೆ ಮರುಪಾವತಿ ಮಾಡದಿದ್ದರೆ ಪುನಃ ಆ ಸಂಸ್ಥೆಯಿಂದ ಸಾಲ ಸಿಗುವುದಿಲ್ಲ. ನಾವು ಸದಸ್ಯರಿಗೆ ಸಾಲ ನೀಡಲು ಸಾಧ್ಯವಾಗುವುದಿಲ್ಲ. ಇದನ್ನರಿತು ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಹಕರಿಸಬೇಕೆಂದು ತಿಳಿಸಿದರು.
ನೂತನ ಸುತ್ತೋಲೆ: ರಾಜ್ಯ ಸರಕಾರದಿಂದ ಇತ್ತೀಚೆಗೆ ಮತ್ತೊಂದು ಸುತ್ತೋಲೆ ಬಂದಿದ್ದು, ಇನ್ನು ಮುಂದೆ ಕೆ.ಸಿ.ಸಿ. ರುಪೇ ಕಾರ್ಡ್ ಮೂಲಕ ಮಾತ್ರ ಸಾಲ ಬಿಡುಗಡೆ ಮಾಡಲು ಸೂಚಿಸಿದೆ. ಇದಲ್ಲದೆ ಜಿಲ್ಲೆಯ 71 ಸಹಕಾರ ಸಂಘಗಳಿಗೆ ಏಕರೂಪದ ಗಣಕೀಕೃತ ತಂತ್ರಾಂಶ ಅಳವಡಿಸಲು ಯೋಜನೆ ಹಾಕಿದ್ದು, ಇದಕ್ಕೆ ರೂ. 75 ಲಕ್ಷವನ್ನು ಡಿ.ಸಿ.ಸಿ. ಬ್ಯಾಂಕ್ ಮೀಸಲಿಟ್ಟಿದೆ. ತಮ್ಮ ಬ್ಯಾಂಕಿನಿಂದ ಸರಕಾರದ ಸಾಲ ಮನ್ನಾ ಯೋಜನೆಯಿಂದ 153 ಕೋಟಿ ಸಾಲ ಮನ್ನಾ ಮಾಡಿದ್ದು, ಬೆಳೆಗಾರರಿಗೆ ನೆರವು ನೀಡಲಾಗಿದೆ. ಇದರಲ್ಲಿ ಸರಕಾರದಿಂದ 143 ಕೋಟಿ ಮಾತ್ರ ಬ್ಯಾಂಕಿಗೆ ಸಂದಾಯವಾಗಿದ್ದು, ರೂ. 10 ಕೋಟಿ ಬರಲು ಬಾಕಿ ಇದೆ. ಸರಕಾರ ಸಂದಾಯ ಮಾಡದೇ ಇರುವುದರಿಂದ ಬ್ಯಾಂಕಿಗೆ 1.99 ಕೋಟಿ ಬಡ್ಡಿ ಮೂಲಕ ನಷ್ಟವಾಗಿದೆ ಎಂದು ಅವರು ಹೇಳಿದರು.
ನೂತನ ಶಾಖೆಯ ನಾಮಫಲಕವನ್ನು ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಭದ್ರತಾ ಕೊಠಡಿಯನ್ನು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ನಗದು ಕೌಂಟರನ್ನು ಟಿ.ಶೆಟ್ಟಿಗೇರಿ ಸಹಕಾರ ಸಂಘದ ಅಧ್ಯಕ್ಷ ಮಚ್ಚಮಾಡ ಮುತ್ತಪ್ಪ ಉದ್ಘಾಟಿಸಿದರು.
ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಪಟ್ರಪಂಡ ರಘು ನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಕುಂಞಂಗಡ ಅರುಣ್ ಭೀಮಯ್ಯ, ಡಿ.ಕೆ. ಚಿಣ್ಣಪ್ಪ, ಎಸ್.ಪಿ. ಭರತ್ ಕುಮಾರ್, ಹೊಸೂರು ಸತೀಶ್ ಕುಮಾರ್, ಕಿಮ್ಮುಡಿರ ಜಗದೀಶ್, ಕೋಲತಂಡ ಸುಬ್ರಮಣಿ, ಉಷಾ ತೇಜಸ್ವಿ, ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ನಬಾರ್ಡ್ ಎ.ಜಿ.ಎಂ. ಶ್ರೀನಿವಾಸ್, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಮತ್ತಿತರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!