ಕುಶಾಲನಗರ: ಇಲ್ಲಿಗೆ ಸಮೀಪದ ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ ಸಂಗೊಳ್ಳಿ ರಾಯಣ್ಣ ಅಬ್ಸ್ಟ್ಯಾಕಲ್ ಕೋರ್ಸ್ನ್ನು ಭಾರತೀಯ ವಾಯು ಸೇನೆಯ ಬೆಂಗಳೂರು ಕೇಂದ್ರದ ಆಡಳಿತ ವಿಭಾಗದ ಮುಖ್ಯಸ್ಥ (ತರಬೇತಿ), ಹಾಗೂ ಕೊಡಗು ಸೈನಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಏರ್ ವೈಸ್ ಮಾರ್ಷಲ್ ಪಿ.ಜೆ.ವಾಲಿಯಾ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅಬ್ಸಟ್ಯಾಕಲ್ ಕೋರ್ಸ್ನ ಪ್ರಮುಖ ಉದ್ದೇಶ ವಿದ್ಯಾರ್ಥಿಗಳನ್ನು ವೈವಿಧ್ಯಮಯವಾಗಿ ಹಾಗೂ ಶಾರೀರಿಕವಾಗಿ ಸದೃಢಗೊಳಿಸುವುದಾಗಿದೆ. ಈ ಅಬ್ಸ್ಟ್ಯಾಕಲ್ ಕೋರ್ಸ್ ವಿದ್ಯಾರ್ಥಿಗಳಿಗೆ ಎಸ್ ಎಸ್ ಬಿ ಸಂದರ್ಶನವನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಲಿದೆ. ಜೊತೆಗೆ ಇದು ಮಕ್ಕಳಲ್ಲಿ ವೈವಿಧ್ಯಮಯ ಕೌಶಲ್ಯಗಳೊಂದಿಗೆ, ಸ್ವಯಂ ಶಿಸ್ತು, ನಿರಂತರ ಪ್ರಯತ್ನ, ಧೈರ್ಯ, ಸಂಘಟಿತ ಕಾರ್ಯಾಚರಣೆ ಮೊದಲಾದ ಅಂಶಗಳನ್ನು ಒಳಗೊಂಡಿದ್ದು, ಅವರನ್ನು ಸಂಪನ್ಮೂಲಗೊಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್ ಹಾಗೂ ಮುಖ್ಯ ಅತಿಥಿಗಳು ನೆನಪಿನ ಕಾಣಿಕೆಯನ್ನು ವಿನಿಮಯ ಮಾಡಿಕೊಂಡರು.
ಇದರೊಂದಿಗೆ ಶಾಲೆಯ ಸಭಾಂಗಣದಲ್ಲಿ 21ನೇ ಸ್ಥಳೀಯ ಆಡಳಿತ ಮಂಡಳಿ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರಿನ ಕಮಾಂಡ್ ಎಜುಕೇಷನ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಆರ್ ಆರ್ ಲಾಲ್, ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಸಭೆಯ ಮುಖ್ಯ ಸಂಚಾಲಕರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ವೈ ಶ್ರೀಕಾಂತ್, ಮೈಸೂರು ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಆರ್ ಶಿವಪ್ಪ, ಮೈಸೂರಿನ ಸಿ ಪಿ ಡಬ್ಲ್ಯೂ ಡಿ ವಿಭಾಗದ ಕಾರ್ಯ ನಿರ್ವಹಣಾ ಅಭಿಯಂತರ ವಿಜಯ ಕುಮಾರ್ ಸ್ವರ್ಣಕಾರ್ ಹಾಗೂ ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ ಎಸ್ ಮಚ್ಚಾಡೋ ಭಾಗವಹಿಸಿದ್ದರು.
ಸಾಂಕ್ರಾಮಿಕ ರೋಗದ ಕಾರಣದಿಂದ ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಕೃಷ್ಣಜಿ ಎಸ್ ಕರಿಚನ್ನಣ್ಣನವರ್, ಹಣಕಾಸು ಇಲಾಖೆಯ ಅಧೀನ ಕಾರ್ಯದರ್ಶಿ ಮೂರ್ತಿ ಹಾಗೂ ಪೋಷಕರ ಪ್ರತಿನಿಧಿಯಾದ ಡಾ ಜಯಭಾರತ್ ಮಡಿವಾಳಪ್ಪ ಮಂಗೇಶ್ಕರ್ ಅವರು ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
ಶಾಲೆಯ ಪ್ರಾಂಶುಪಾಲ ಹಾಗೂ ಸದಸ್ಯ ಕರ್ನಲ್ ಜಿ ಕಣ್ಣನ್ ಅವರು ಶಾಲೆಯ ತರಬೇತಿ ಹಾಗೂ ಆಡಳಿತದ ಕುರಿತು ವಿವರಿಸುವುದರೊಂದಿಗೆ, ಕಳೆದು ಒಂಬತ್ತು ತಿಂಗಳಿನಲ್ಲಿ ಶಾಲೆಯು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚಿಸುವುದರೊಂದಿಗೆ, ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.