ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದಿದ್ದ ‘ಗ್ರಾಮ್ ಜನಾಧಿಕಾರ ಸಮಾವೇಶ’ದಲ್ಲಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಎಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ವೇಳೆ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಆಹಾರ ಸಂಸ್ಕೃತಿಯ ಬಗ್ಗೆ ನಾನು ಆಡಿದ ಮಾತನ್ನು ತಪ್ಪು ಗ್ರಹಿಕೆ ಮಾಡಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ಟ್ವೀಟ್ ಮೂಲಕ ತಮ್ಮ ಹೇಳಿಕೆಯ ಬಗ್ಗೆ ವಿವರಣೆ ನೀಡಿರುವ ಅವರು, ಆಡು, ಕುರಿ, ಕೋಳಿ, ಹಂದಿ, ದನ ಹೀಗೆ… ನಮ್ಮಲ್ಲಿ ಭಿನ್ನ ಆಹಾರ ಸಂಸ್ಕೃತಿ ಇದೆ. ಆಹಾರಕ್ಕೆ ಜಾತಿ – ಧರ್ಮಗಳನ್ನು ಗಂಟು ಹಾಕುವುದು ತಪ್ಪು ಎಂಬರ್ಥದಲ್ಲಿ ನಾನು ಹೇಳಿದ್ದೇನೆಯೇ ಹೊರತು ಕೊಡವರು ಬೀಫ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ. ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ ಎಂದಿದ್ದಾರೆ.
ಕೊಡವರೂ ಬೀಫ್ ತಿನ್ನುತ್ತಾರೆ ಎಂಬ ನನ್ನ ಹೇಳಿಕೆ ತಪ್ಪು ಗ್ರಹಿಕೆಯಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾದಿಸುತ್ತೇನೆ. ನನ್ನ ನೆರೆಯ ಜಿಲ್ಲೆಯಾದ ಕೊಡಗಿನ ಸಂಸ್ಕೃತಿ ಬಗ್ಗೆ ನನಗೆ ಅರಿವಿದೆ. ವಿಶೇಷವಾದ ಗೌರವವೂ ಇದೆ ಎಂದಿದ್ದಾರೆ.