ಹೊಸ ದಿಗಂತ ವರದಿ, ಮಡಿಕೇರಿ:
‘ಕೊಡವರೂ ಬೀಫ್ ತಿನ್ನುತ್ತಾರೆ’ ಎನ್ನುವ ಹೇಳಿಕೆ ನೀಡುವ ಮೂಲಕ ಇಡೀ ಕೊಡವ ಸಮುದಾಯಕ್ಕೆ ಅಪಮಾನ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಹೋರಾಟ ಮುಂದುವರೆಸುವುದಾಗಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿಯ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ತಾನ ನೀಡಿದ ದೂರನ್ನು ಜ.7 ರಂದು ದಾಖಲಿಸಿಕೊಂಡಿರುವ ಪೊಲೀಸರು ಸೆಕ್ಷನ್ 153ರಡಿ ಮೊಕದ್ದಮೆ ದಾಖಲಿಸಿದ್ದಾರೆ. ಇದು ಜಾಮೀನು ಸಿಗಬಹುದಾದ ಸೆಕ್ಷನ್ ಆಗಿದೆ. ಆದರೆ, ತಮ್ಮ ಹೇಳಿಕೆಯ ಮೂಲಕ ಇಡೀ ಕೊಡವ ಸಮುದಾಯದ ತೇಜೋವಧೆ ಮಾಡಿರುವ ಮತ್ತು ಗೋವನ್ನು ತಾಯಿಯಂತೆ ಪೂಜಿಸುವ ಕೊಡವರ ಮನಸ್ಸಿಗೆ ಘಾಸಿಗೊಳಿಸಿರುವ ಸಿದ್ದರಾಮಯ್ಯ ಅವರ ವಿರುದ್ಧ ಸೆಕ್ಷನ್ 153ಎ, 295ಎ ಅನ್ವಯ ಪ್ರಕರಣ ದಾಖಲಾಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ನಡೆ ಬಗ್ಗೆ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದರು.
ಕೊಡವ ಸಮೂಹದ ಭಾವನೆಗೆ ಧಕ್ಕೆ ತರುವ ಕೆಲಸ
ಯಾರನ್ನೋ ಮೆಚ್ಚಿಸುವ ಉದ್ದೇಶದಿಂದ ಕೊಡವ ಸಮುದಾಯವನ್ನು ಅಪಮಾನಿಸುವ, ಹೀಯಾಳಿಸುವ ರೀತಿಯ ಹೇಳಿಕೆ ನೀಡಲಾಗಿದೆ. ಈ ಹಿಂದೆ ಟಿಪ್ಪು ಜಯಂತಿ ನಡೆಸಿಯೇ ಸಿದ್ಧ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದರು. ಇದೀಗ ಹಸುವನ್ನು ‘ತಾಯಿ’ ಯಂತೆ ಕಾಣುವ ಕೊಡವ ಸಮೂಹದ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಬಾಯಿ ತಪ್ಪಿನಿಂದ ಹಾಗೆ ಹೇಳಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಮಾತ್ರ ಸಮರ್ಥಿಸಿಕೊಂಡಿದ್ದು, ಉಳಿದ ಕಾಂಗ್ರೆಸ್ಸಿಗರ ಮೌನದ ಹಿಂದಿನ ಗುಟ್ಟೇನು ಎಂದು ಪ್ರಶ್ನಿಸಿದ ರವಿಕುಶಾಲಪ್ಪ, ಕಾಂಗ್ರೆಸ್ಸಿನಲ್ಲಿರುವ ಸ್ವಾಭಿಮಾನಿ ಕೊಡವರು ಹಾಗೂ ಗೋವನ್ನು ತಾಯಿಯಂತೆ ಕಾಣುವ ಇತರರು ಕೂಡಾ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಅಲ್ಲದೆ ಕೊಡವ ಸಮುದಾಯದ ವಿರುದ್ಧ ಹೇಳಿಕೆ ನೀಡಿರುವವರನ್ನು ಸಮರ್ಥಿಸುವ ಕಾಂಗ್ರೆಸ್ಸಿಗರ ವರ್ತನೆಯನ್ನು ನಾವಿಂದು ಪ್ರಶ್ನಿಸಬೇಕಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
ತಾನೊಬ್ಬ ವಕೀಲನಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರು ಅಂದಿನಿಂದಲೂ ಕೊಡಗು ಹಾಗೂ ಕೊಡವರ ಬಗ್ಗೆ ದ್ವೇಷ ಕಾರುತ್ತಲೇ ಇದ್ದು, ಟಿಪ್ಪು ಜಯಂತಿಯನ್ನು ಬಲವಂತವಾಗಿ ಹೇರುವ ಮೂಲಕ ಕೊಡವರ ಭಾವನೆಗಳಿಗೆ ಘಾಸಿಗೊಳಿಸಿದ್ದಲ್ಲದೆ, ಜಿಲ್ಲೆಯಲ್ಲಿ ಅನ್ಯೋನ್ಯವಾಗಿದ್ದ ಹಿಂದೂ ಮುಸ್ಲಿಮರ ನಡುವೆ ಕಂದಕ ಸೃಷ್ಟಿಸಲು ಕಾರಣರಾಗಿದ್ದಾರೆ. ಅಲ್ಲದೆ ಕುಟ್ಟಪ್ಪ ಅವರ ಸಾವಿಗೂ ಕಾರಣರಾಗಿದ್ದಾರೆ ಎಂದು ರವಿ ಕುಶಾಲಪ್ಪ ದೂರಿದರು.