spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಡೇರಿ ಜಲ ದುರಂತ| ನಾಲ್ವರು ಮೀನುಗಾರರ ಮೃತ ದೇಹಗಳು ಪತ್ತೆ

- Advertisement -Nitte

ಉಡುಪಿ: ಕೊಡೇರಿ ದೋಣಿ ದುರಂತದಲ್ಲಿ ಕಣ್ಮರೆಯಾಗಿದ್ದ ನಾಲ್ವರು ಮೀನುಗಾರರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ ಎಂದು ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಆರ್. ತಿಳಿಸಿದ್ದಾರೆ.
ಉಪ್ಪುಂದ ಗ್ರಾಮದ ಬಿ. ನಾಗ ಖಾರ್ವಿ. ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರ ಮೃತದೇಹಗಳು ಸಮುದ್ರ ಕಿನಾರೆಯಲ್ಲಿ ಕಂಡು ಬಂದಿವೆ.
ಸೋಮವಾರ ಬೆಳಗ್ಗೆ ಘಟನಾ ಸ್ಥಳವಾದ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಅಳಿವೆ ಬಾಗಿಲಿನಿಂದ ದಕ್ಷಿಣ ಭಾಗದಲ್ಲಿ ಸುಮಾರು 1.5 ಕಿ.ಮೀ. ದೂರದ ನಾಗೂರಿನಲ್ಲಿ ನಾಗ ಖಾರ್ವಿ ಅವರ ಮೃತದೇಹ ಪತ್ತೆಯಾಗಿತ್ತು. ನಂತರ ರಾತ್ರಿ ಘಟನಾ ಸ್ಥಳದಿಂದ ದಕ್ಷಿಣ ಭಾಗದಲ್ಲೇ 5 ಕಿ.ಮೀ. ದೂರದ ಆದ್ರಗೋಳಿಯಲ್ಲಿ ಲಕ್ಷ್ಮಣ ಖಾರ್ವಿ ಮತ್ತು 1 ಕಿ.ಮೀ. ದೂರದಲ್ಲಿ ಶೇಖರ ಖಾರ್ವಿ ಅವರ ಮೃತದೇಹಗಳು ಕಂಡುಬಂದಿವೆ. ಮಂಜುನಾಥ ಖಾರ್ವಿ ಅವರ ಮೃತದೇಹ ಕೂಡ ಅಲ್ಲೇ ಸಮೀಪ ಗಂಗೆಬೈಲು ಎಂಬಲ್ಲಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಕೋಸ್ಟ್‌ಗಾರ್ಡ್, ನುರಿತ ಮುಳುಗು ತಜ್ಞರ ನೆರವು ಪಡೆದರೂ ನಾಪತ್ತೆಯಾದ ಮೀನುಗಾರರಲ್ಲಿ ಮೂವರ ಸುಳಿವು ಸಿಕ್ಕಿರಲಿಲ್ಲ. ಅಲ್ಲದೇ ಸಮುದ್ರದ ಅಲೆಗಳು ತೀವ್ರಗೊಂಡಿರುವುದು ಕಾರ್ಯಾಚರಣೆಯೂ ಹಿನ್ನಡೆಯಾಗಿತ್ತು. ಇದಕ್ಕಾಗಿ ಡ್ರೋಣ್ ಮೊರೆ ಹೋಗಲಾಗಿತ್ತು. ಈ ವೇಳೆ ಡ್ರೋಣ್ ಕ್ಯಾಮೆರಾವು ಕೊಡೇರಿ ಅಳಿವೆ ಬಾಗಿಲಿನಿಂದ ಸುಮಾರು ಅರ್ಧ ಕಿ.ಮೀ. ಒಳಗೆ ಶವವೊಂದು ತೇಲುತ್ತಿರುವ ಛಾಯಾಚಿತ್ರವನ್ನು ಸೆರೆ ಹಿಡಿದಿತ್ತು. ಅದು ಶೇಖರ ಖಾರ್ವಿ ಅವರದ್ದಾಗಿದ್ದು, ಘಟನಾ ಸ್ಥಳದಿಂದ 1 ಕಿ.ಮೀ. ದೂರದಲ್ಲಿ ಸಮುದ್ರ ತೀರಕ್ಕೆ ಬಂದಿದೆ.
ಶೋಧ ಕಾರ್ಯಕ್ಕೆ ಕೋಸ್ಟ್ ಗಾರ್ಡ್ ನೆರವು
ಕೋಸ್ಟ್‌ಗಾರ್ಡ್ ನೌಕೆ ಕೂಡ ಮೀನುಗಾರರ ಶೋಧ ಕಾರ್ಯಾಚರಣೆಗೆ ನೆರವು ನೀಡುತ್ತಿದೆ. ಮುರುಡೇಶ್ವರದಿಂದ ನಾಲ್ವರು ನುರಿತ ಮುಳುಗು ತಜ್ಞರನ್ನು ಕರೆಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಸಮುದ್ರದಾಳದಲ್ಲಿ ಶೋಧ ಕಾರ್ಯ ಸಾಧ್ಯವಾಗಿರಲಿಲ್ಲ. ಆದರೆ ರಾತ್ರಿ ವೇಳೆ ಕಣ್ಮರೆಯಾಗಿದ್ದ ಮೂವರ ಮೃತದೇಹಗಳು ಕೂಡ ಸಮುದ್ರ ತೀರಕ್ಕೆ ಬಂದಿವೆ ಎಂದು ಸಿಎಸ್ಪಿ ಎಸಿ ಚೇತನ್ ಆರ್. ’ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.
ಘಟನೆ ನಡೆದ ನಂತರ ಸಿಎಸ್ಪಿ ಎಸ್ಪಿ ಚೇತನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆಯ ಕುರಿತು ಮಾರ್ಗದರ್ಶನ ನೀಡಿದ್ದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ, ಎಸ್ಪಿ ವಿಷ್ಣುವರ್ಧನ್ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಸಿಎಸ್ಪಿ ಗಂಗೊಳ್ಳಿ ಠಾಣೆಯ ಎಸೈ ಸಂದೀಪ್ ಅವರು ಸ್ಥಳದಲ್ಲಿಯೇ ಇದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಭಾನುವಾರ ಮಧ್ಯಾಹ್ನ ಸಾಗರಶ್ರೀ ಎಂಬ ಮೀನುಗಾರಿಕಾ ನಾಡದೋಣಿಯು ಜಲದುರಂತಕ್ಕೀಡಾಗಿತ್ತು. ಇದರಲ್ಲಿ 12 ಮಂದಿ ಮೀನುಗಾರರ ಪೈಕಿ 8 ಮಂದಿಯನ್ನು ರಕ್ಷಿಸಿದ್ದರೆ, ಉಳಿದ ನಾಲ್ವರು ನಾಪತ್ತೆಯಾಗಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss