ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಂದರಿನ ಸಮೀಪ ಭಾನುವಾರ ಮಧ್ಯಾಹ್ನ ನಡೆದ ದೋಣಿ ಅವಘಡದಲ್ಲಿ ನಾಪತ್ತೆಯಾಗಿರುವ ನಾಲ್ವರು ಮೀನುಗಾರರ ಪತ್ತೆಗೆ ಕರಾವಳಿ ಕಾವಲು ಪೊಲೀಸ್ ಮಾತ್ರವಲ್ಲದೇ ಕೋಸ್ಟ್ ಗಾರ್ಡ್ನಿಂದಲೂ ನೆರವು ಪಡೆಯಲಾಗುತ್ತಿದೆ.
ಭಾನುವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಕೋಸ್ಟ್ ಗಾರ್ಡ್ ಡಿಐಜಿ ಅವರೊಂದಿಗೆ ಮಾತನಾಡಿದ್ದಾರೆ. ಕೋಸ್ಟ್ ಗಾರ್ಡ್ನ ಒಂದು ಶಿಪ್ನೊಂದಿಗೆ ಅವರ ತಂಡ ಸೋಮವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿಯಲಿದೆ.
ಬೆಳಗ್ಗೆ ಸಮುದ್ರದಾಳದಲ್ಲಿ ಹುಡುಕಾಟ
ಕರಾವಳಿ ಕಾವಲು ಪೊಲೀಸ್ ತಂಡವು ಮಧ್ಯಾಹ್ನದಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಯಾವುದೇ ಲ ನೀಡಿಲ್ಲ. ಸಂಜೆಯ ವೇಳೆ ಜೆಸಿಬಿಯಿಂದ ಸ್ಥಳದಲ್ಲಿ ಸಿಕ್ಕಿಕೊಂಡಿದ್ದ ಎಲ್ಲ ಬಲೆಯನ್ನು ಮೇಲಕ್ಕೆತ್ತಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಸದ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ನಿರ್ದಿಷ್ಟ ಸ್ಥಳಗಳಲ್ಲಿ ಸಿಎಸ್ಪಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ತಂಡವೊಂದು ಸಮುದ್ರ ತೀರದಲ್ಲಿ ಗಸ್ತು ತಿರುಗುತ್ತಿದೆ. ಬೆಳಗ್ಗೆ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ. ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡು ಸಮುದ್ರದಾಳದಲ್ಲಿ ಹುಡುಕಾಟ ನಡೆಸಲಾಗುವುದು ಎಂದು ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಆರ್. ’ಹೊಸ ದಿಗಂತ’ಕ್ಕೆ ತಿಳಿಸಿದ್ದಾರೆ.
ಸಮುದ್ರ ರಫ್: ಕಾರ್ಯಾಚರಣೆಗೆ ತೊಡಕು
ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ಸಮುದ್ರ ರಫ್ ಇರುವುದರಿಂದ ಬೆಳಗ್ಗೆ ಪೂರ್ಣ ಪ್ರಮಾಣದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ. ಕೋಸ್ಟ್ಗಾರ್ಡ್ ಡಿಐಜಿ ಅವರೊಂದಿಗೆ ಮಾತನಾಡಿದ್ದು, ಒಂದು ಶಿಪ್ನೊಂದಿಗೆ ತಂಡವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಸಿಎಸ್ಪಿ ಪೊಲೀಸರ ತಂಡವೂ ಶೋಧ ಕಾರ್ಯ ನಡೆಸಲಿದ್ದಾರೆ.
ಮೀನುಗಾರರಿಗೂ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ವಿವರಿಸಿದ್ದಾರೆ.
ದೋಣಿಯಲ್ಲಿದ್ದದ್ದು 12 ಮಂದಿ
ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯಲ್ಲಿ ಉಪ್ಪುಂದ ಗ್ರಾಮದ 12 ಮಂದಿ ಮೀನುಗಾರರಿದ್ದರು. ಇವರಲ್ಲಿ ಉಪ್ಪುಂದ ಗ್ರಾಮದ ಬಿ. ನಾಗ (52), ಲಕ್ಷ್ಮಣ (37), ಶೇಖರ ಜಿ. (40) ಮತ್ತು ಮಂಜುನಾಥ (40) ಅವರು ನಾಪತ್ತೆಯಾಗಿದ್ದಾರೆ. ಅದೇ ದೋಣಿಯಲ್ಲಿ ಉಪ್ಪುಂದ ಗ್ರಾಮದ ನಿತ್ಯಾನಂದ (39), ಸತೀಶ (32), ಅಣ್ಣಪ್ಪ (39), ಮಹಾಬಲ (40), ಜನಾರ್ದನ (35), ವೆಂಕಟರಮಣ (38), ಚಂದ್ರಶೇಖರ (32) ಮತ್ತು ಚಂದ್ರ (45) ಎಂಬವರು ಸಣ್ಣಪುಟ್ಟಗಳೊಂದಿಗೆ ಬಚಾವಾಗಿದ್ದಾರೆ. ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದ ಐವರು ಮನೆಗೆ ತೆರಳಿದ್ದಾರೆ.