Wednesday, July 6, 2022

Latest Posts

ಕೊಪ್ಪಳ| ಎರಡನೇ ದಿನ ಲಾಕ್‌ಡೌನ್‌ ಸಡಿಲ-  ಗಿಜಿಗುಡುತ್ತಿರುವ ನಗರ ಮಾರುಕಟ್ಟೆ!

ಕೊಪ್ಪಳ:  ಲಾಕ್‌ಡೌನ್‌  ತೆರವುಗೊಂಡ ಎರಡನೇ ದಿನಕ್ಕೆ ಮಾರುಕಟ್ಟೆಯಲ್ಲಿ ಸಾವಿರಾರು ಜನ ವ್ಯಾಪಾರ, ವಹಿವಾಟಿಗೆ ಬಂದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.
ಮುಂದೆ ಹೇಗೇ ಏನೂ ಎಂಬ ಆತಂಕದಲ್ಲಿಯೇ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆಯೂ ಮಾರುಕಟ್ಟೆಗೆ ವಿವಿಧ ವಸ್ತುಗಳ ಖರೀದಿಗೆ ಬಂದಿದ್ದರು. ಉಪಹಾರ ಮಂದಿರಗಳ ಪಾರ್ಸ್‌ಲ್ ಸೇವೆ, ಮದ್ಯದಂಗಡಗಿ ಆರಂಭಗೊಂಡಿರುವುದರಿಂದ ಹೆಚ್ಚಿನ ದಟ್ಟಣೆ ಕಂಡು ಬರುತ್ತಿದೆ. ಸಲೂನ್, ಸಿನಿಮಾ ಮಂದಿರ, ಹೊಟೇಲ್‌ಗಳು ಬಿಟ್ಟರೆ ಮಾರುಕಟ್ಟೆಯ ಬಹುತೇಕ ಅಂಗಡಿಗಳು ಇಂದು ತೆರೆದಿದ್ದವು.
೪೦ ದಿನ ಬಿಕೋ ಎನ್ನುತ್ತಿದ್ದ ಕೇಂದ್ರ ಬಸ್ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿತ್ತು. ಬೇರೆ ರಾಜ್ಯಗಳಿಗೆ ಹೋಗುವ ಮತ್ತು ಬರುವ ವಲಸೆ ಕಾರ್ಮಿಕರು ಬಸ್‌ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದರು. ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಕ್ರೀನಿಂಗ್ ಸೇರಿದಂತೆ ಇತರೆ ಆರೋಗ್ಯ ಪರೀಕ್ಷೆ ನಡೆಸಿ ಅವರ ಗ್ರಾಮಗಳಿಗೆ ತೆರಳಲು ಅನುವು ಮಾಡಿಕೊಟ್ಟರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂಕುನುಗ್ಗಲು
ವಿವಿಧ ಕಾರಣಕ್ಕಾಗಿ ಪರವಾನಗಿ ಪಡೆದ ಜನರು ಮೂರನೇ ಹಂತದ ಲಾಕ್‌ಡೌನ್‌ಗಾಗಿ ಮತ್ತೆ ಪರವಾನಗಿ ನವೀಕರಣಕ್ಕೆ ನೂರಾರು ಸಂಖ್ಯೆಯಲ್ಲಿ ಬಂದಿದ್ದರು. ಹಣ್ಣು, ತರಕಾರಿ, ಸರಕು ವಾಹನ, ಬೇರೆ ಜಿಲ್ಲೆಗೆ ತೆರಳುವ ಜನ, ಆರೋಗ್ಯ ಸಮಸ್ಯೆ, ಸಂಬಂಧಿಗಳನ್ನು ಸೇರುವ ತವಕದಿಂದ ಅರ್ಜಿ ತುಂಬುವುದರಲ್ಲಿ ನಿರತರಾಗಿದ್ದರು. ಅನೇಕರು ತಮ್ಮ ಸಂಬಂಧಿಕರನ್ನು ಬೇರೆ ಜಿಲ್ಲೆಗಳಲ್ಲಿ ಕರೆಸಿಕೊಳ್ಳಲು ಪರದಾಡುತ್ತಿದ್ದರು. ಗಂಭೀರ ಆರೋಗ್ಯ ಸಮಸ್ಯೆ ಮತ್ತು ಸಾವು ಪ್ರಕರಣದಲ್ಲಿ ಮಾತ್ರ ಪರವಾನಗಿ ಸರಳವಾಗಿ ದೊರೆಯುತ್ತಿದ್ದು, ಉಳಿದ ಪ್ರಕರಣಗಳಲ್ಲಿ ತುಂಬಾ ಕಷ್ಟಕರವಾಗಿ ಪರಿಣಮಿಸಿದೆ.
ನಿವಾಸಿಗಳಿಗೆ ಆತಂಕ
 ನಗರದ ಭಾಗ್ಯನಗರ ಸೇತುವೆ ಕೆಳಗೆ ಇರುವ ಎಂಎಸ್‌ಐಎಲ್‌ ಮದ್ಯದಂಗಡಿ ಆರಂಭಿಸದಂತೆ ಮಹಿಳೆಯರು ಇಂದು ಕೂಡಾ ಪ್ರತಿಭಟನೆ ನಡೆಸಿದರು.  ಅದರಂತೆ ತಾಲೂಕಿನ ಕಿನ್ನಾಳದಲ್ಲಿ ಕೂಡ ಮಹಿಳೆಯರು ಪ್ರತಿಭಟನೆ ನಡೆಸಿದರು.
ರಸ್ತೆ ಇಕ್ಕಟ್ಟಾಗಿದ್ದರಿಂದ ರಸ್ತೆಯ ಮೇಲೆ ಗಲಾಟೆ ಮಾಡುತ್ತಿರುವುದು ನಿತ್ಯದ ದೃಶ್ಯವಾಗಿತ್ತು. ಈ ಲಾಕ್‌ಡೌನ್‌ನಿಂದ ಹಾವಳಿ ಕಡಿಮೆಯಾಗಿತ್ತು. ಆದರೆ ಮದ್ಯದ ಅಂಗಡಿ ಆರಂಭಗೊಂಡಿರುವುದರಿಂದ ಎಂದಿನಂತೆ ಗದ್ದಲ ಉಂಟಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss