ಕೊಪ್ಪಳ: ಪಶ್ಚಿಮ ಬಂಗಾಳ ರಾಜ್ಯದ ಸಾಂತಿಪುರದಲ್ಲಿ ಇಮೇಜಿಕ್ಸ್ ಫೋಟೋ ಕ್ಲಬ್ ಆಫ್ ಸಾಂತಿಪುರ ಇವರಿಂದ ಆಯೋಜಿಸಲಾಗಿದ್ದ ಮೊದಲನೇ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಜಿಲ್ಲೆಯ ಛಾಯಾಗ್ರಾಹಕ ಪ್ರಕಾಶ ಕಂದಕೂರರ ‘ಬದುಕಿದೆಯಾ ಬಡ ಜೀವಿ…’ ಶೀರ್ಷಿಕೆಯ ಛಾಯಾಚಿತ್ರ ‘ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ರಿಬ್ಬನ್(ಎಫ್.ಐ.ಪಿ ರಿಬ್ಬನ್)’ ಗೌರವಕ್ಕೆ ಪಾತ್ರವಾಗಿದೆ.
ಹಾವೇರಿ ಜಿಲ್ಲೆಯ ದೇವಿ ಹೊಸೂರಿನಲ್ಲಿ ನಡೆದ ಹೋರಿ ಹಬ್ಬದ ಸಂದರ್ಭದಲ್ಲಿ ಜನರು ಕ್ರೋಧಗೊಂಡ ಹೋರಿಯೊಂದರಿಂದ ಬಚಾವಾಗಲು ಹೆಣಗಾಡುತ್ತಿರುವ ರೋಚಕ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಕಂದಕೂರರಿಗೆ ಈ ಪ್ರಶಸ್ತಿ ಲಭಿಸಿದೆ. ಅಲ್ಲದೆ ಅವರ ಒಟ್ಟು 3 ಚಿತ್ರಗಳು ಪ್ರದರ್ಶನಕ್ಕೂ ಆಯ್ಕೆಯಾಗಿವೆ.
ದೇಶದ ವಿವಿಧ ರಾಜ್ಯಗಳಿಂದ ಒಟ್ಟು 343 ಜನ ಸ್ಪರ್ಧಿಗಳ 2,200 ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾತೀರ್ಪುಗಾರರಾದ ಶರ್ಮಲಿ ದಾಸ್, ಸೌರವ್ ಶಿಟ್, ಸೌನಕ್ ಬ್ಯಾನರ್ಜಿ, ಅವಿಶೇಕ್ ಮುಜುಂದಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಆಗಸ್ಟ್ 22 ರಿಂದ ಸಾಂತಿಪುರದಲ್ಲಿ ಛಾಯಾಚಿತ್ರಗಳ ಪ್ರದರ್ಶನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅನಿಮೇಶ್ ಘೋಷ್ ತಿಳಿಸಿದ್ದಾರೆ.