Wednesday, June 29, 2022

Latest Posts

ಉಡುಪಿ ಜಿಲ್ಲೆಯಲ್ಲಿ ಕೊಂಚ ಬಿಡುವು ನೀಡಿದ ವರ್ಷಧಾರೆ: ಅತಿ ಭಾರೀ ಮಳೆ ಸುರಿಯುವ ನಿರೀಕ್ಷೆ, ಆರೆಂಜ್ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಪ್ರಮಾಣ ಶನಿವಾರ ಕೊಂಚ ತಗ್ಗಿದೆ. ಮಧ್ಯಾಹ್ನವರೆಗೆ ನಿರಂತರವಾಗಿ ಮಳೆಯಾಗುತ್ತಿದ್ದರೆ, ನಂತರ ಸ್ವಲ್ಪ ಬಿಡುವುದು ನೀಡಿದೆ.
ಉಡುಪಿ ಜಿಲ್ಲೆಯಲ್ಲಿ ಶನಿವಾರ ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಭಾರತ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರವು ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆ ನೀಡಿತ್ತು. ಜಿಲ್ಲೆಯ ಕೆಲವು ಸ್ಥಳಗಳಲ್ಲಿ 115 ಮಿ.ಮೀ.ಗೂ ಅಧಿಕ ಮಳೆ ನಿರೀಕ್ಷಿಸಲಾಗಿದೆ. ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನವರೆಗೆ ಮಳೆ ಸುರಿದಿದೆ. ಮಳೆಯೊಂದಿಗೆ ಕುಳಿರ್ಗಾಳಿ ಬೀಸುತ್ತಿರುವುದರಿಂದ ವಾತಾವರಣ ಥಂಡಿಯಾಗಿದೆ.
ಶುಕ್ರವಾರ ಅತ್ಯಂತ ಭಾರೀ ಮಳೆ ಸುರಿಯುವ ಮುನ್ಸೂಚನೆ ಇತ್ತು. ಈ ಅವಧಿಯಲ್ಲಿ ಉಡುಪಿ ಮತ್ತು ಕುಂದಾಪುರ ತಾಲೂಕುಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಕುಂದಾಪುರ ತಾಲೂಕಿನಲ್ಲಿ ಗರಿಷ್ಠ 107.5 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 81.6 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 76.5 ಮಿ.ಮೀ. ಮಳೆ ಬಿದ್ದಿದೆ.
ಬಳ್ಕೂರು ಗ್ರಾಮದಲ್ಲಿ ಅತ್ಯಂತ ಭಾರೀ ಮಳೆ ದಾಖಲಾಗಿದ್ದು, 210 ಮಿ.ಮೀ. ಸುರಿದಿದೆ. ಕೋಣಿಯಲ್ಲಿ 196 ಮಿ.ಮೀ. ಮಳೆ ಬಿದ್ದಿದೆ. ಖಂಬದಕೋಣೆ 167, ಮಣಿಪುರ 164, ಆನಗಳ್ಳಿ 162, ಕಿರಿಮಂಜೇಶ್ವರ 157, ಕಾಲ್ತೋಡು 155, ನಾಡಾ 147, ಆಲೂರು 146, ಹಕ್ಲಾಡಿ 142, ಇನ್ನಂಜೆ 141, ಕುಂಭಾಶಿ 137, ಬಸ್ರೂರು 135, ಬಿಜೂರು 132, ಕಾಳಾವರ ಮತ್ತು ಹೇರೂರು 128, ಕೋಡಿ 124, ಹೆಮ್ಮಾಡಿ ಮತ್ತು ಕೊರ್ಗಿ 118 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯ 18 ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss