Tuesday, August 9, 2022

Latest Posts

ಕೊಪ್ಪಳ: ಡಿ.ಕೆ.‌ಶಿಯ ಟೀಕೆಗೆ ಹುರುಳಿಲ್ಲ : ಕೃಷಿ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ‌

ಕೊಪ್ಪಳ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಒಳಗೊಂದು ಹೊರಗೊಂದು ಮಾತನಾಡುವ ದ್ವಂದ್ವನೀತಿ ಬಿಡಬೇಕೆಂದು ಕೃಷಿ ಸಚಿವ ಬಿ.ಸಿ.‌ಪಾಟೀಲ್ ತೀವ್ರ ವಾಗ್ದಾಳಿ‌ ನಡೆಸಿದರು. ನಗರದಲ್ಲಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದವ್ರು ತಾವು ಹಂಚುವ ಆಹಾರಧಾನ್ಯ ಮತ್ತಿತರೆ ಅವಶ್ಯಕ ಪದಾರ್ಥಗಳ‌ ಕಿಟ್ ಮೇಲೆ ಬಿಜೆಪಿ ಚಿಹ್ನೆ ಹಾಕಿ ವಿತರಿಸುತ್ತಿದ್ದಾರೆ ಎಂಬ ಅವರ ಟೀಕೆ ಹುರುಳಿಲ್ಲದ್ದು. ಬಿಜೆಪಿ ಮುಖಂಡರು ತಮ್ಮ ಸ್ವಂತ ಖರ್ಚಿನಲ್ಲಿ ವಿತರಣೆ ಮಾಡುತ್ತಿರುವ ಕಿಟ್ ಗಳನ್ನು ತಂದು ಅವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ. ವಿವರಗಳನ್ನು ಪರಿಶೀಲಿಸಿ ಮಾತನಾಡಬೇಕೆಂದರು.
ಇತ್ತೀಚೆಗೆ ವಿಧಾನಸೌಧದಲ್ಲಿ‌ ಸರ್ಕಾರ ನಡೆಸಿದ ಸರ್ವಪಕ್ಷಗಳ‌ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾ ಸಂಕಷ್ಟ ಸಮಯದಲ್ಲಿ‌ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹತ್ತಾರು ಬಾರಿ ಹೊಗಳಿದರು. ಹೀಗೆ ಹೇಳಿದವರು ಹೊರಗೆ ಅನಗತ್ಯ ಟೀಕೆ-ಆರೋಪ ಮಾಡುತ್ತಿದ್ದಾರೆ.‌ ಈಗ ತಾನೇ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಟೀಕಿಸಿದಿದ್ದರೆ ಅಧ್ಯಕ್ಷ ಸ್ಥಾನ ಹೋದೀತು ಎಂಬ ಆತಂಕದಲ್ಲಿ ಮಾಧ್ಯಮದವರೆದುರು ಸರಕಾರವನ್ನು ಟೀಕಿಸುತ್ತಿರಬಹುದು ಎಂದು ಲೇವಡಿ ಮಾಡಿದ ಪಾಟೀಲ್, ಡಿಕೆಶಿ ಇಂಥ ಇಬ್ಬಗೆ ನೀತಿಯನ್ನು ಅವರು ಬಿಡಬೇಕೆಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಮಾಡುವ ಹುರುಳಿಲ್ಲದ ಟೀಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಏಪ್ರಿಲ್ ತಿಂಗಳಿನಲ್ಲಿ ತೀರಾ ಅವಶ್ಯಕ ಸೇವೆ ಹೊರತುಪಡಿಸಿ ‌ಉಳಿದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ.‌ ಈಗ ಅವು ಪುನಾರಂಭವಾಗಿದ್ದು ಎಲ್ಲ ಬಿಲ್ ಗಳನ್ನು ಕ್ರಮವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಬಿಲ್ ಮತ್ತು ಸಂಬಳ ನೀಡಲಾಗದಂಥ ಮಟ್ಟಕ್ಕೆ ಸರ್ಕಾರ ಹೋಗಿಲ್ಲ. ಎಲುಬಿಲ್ಲದ ನಾಲಗೆ ಅಂತ ಏನೇನೋ ಮಾತನಾಡೋದನ್ನ ಎಚ್‌ಡಿಕೆ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು‌.
ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ವಿವರಿಸಿದ ಅವರು,ಪ್ರತಿ ರಾಜ್ಯಕ್ಕೂ ಓರ್ವ ಐಎಎಸ್‌ ಹಂತದ ಅಧಿಕಾರಿಯನ್ನು ನಿಯೋಜಿಸಿ ಸೇವಾಸಿಂಧು ಮೂಲಕ ಪ್ರಯಾಣ ಮಾಡುವವರ ವಿವರ ನೋಂದಾಯಿಸಿಕೊಂಡು ಕಳಿಸಲಾಗಿದೆ. ಸರ್ಕಾರ ಯಾರಿಗೂ ತೊಂದರೆಯಾಗದಂತೆ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಢೇಸೂಗುರು, ಪರಣ್ಣ ಮುನವಳ್ಳಿ ಅಮರೇಶ ಕರಡಿ ಸೇರಿದಂತೆ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss