ಕೊಪ್ಪಳ: ನಿಡಶೇಸಿ ಕೆರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಒಂದು ವೇಳೆ ಸಾಬೀತು ಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಹೇಳಿದರು.
ಈ ಕುರಿತು ಸೋಮವಾರ ಕುಷ್ಟಗಿ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಡಶೇಸಿ ಕೆರೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಅಮರೇಗೌಡ ಬಯ್ಯಾಪೂರು ಅವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ತಮ್ಮ ಮೇಲೆ ಆರೋಪ ಮಾಡಿರುವುದು ಶುದ್ಧ ಸುಳ್ಳು. ತಾಲೂಕಿನ ೩೩ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರರಿಗೂ ಕಾಮಗಾರಿಯಲ್ಲಿ ಶೇ. ೮೦ ರಷ್ಟು ಕಾಮಗಾರಿ ಗುಣಮಟ್ಟತೆಯಿಂದ ಕೂಡಿರಬೇಕು ಎಂದು ಸೂಚಿಸಿದ್ದೇನೆ.
ಕ್ಷೇತ್ರದಲ್ಲಿನ ಏನೇ ಅಭಿವೃದ್ಧಿ ವಿಷಯದಲ್ಲಿ. ೫ ಲಕ್ಷ ರೂಪಾಯಿ ಪ್ರಾಜೆಕ್ಟ್ ಸಣ್ಣ ಕಾಮಗಾರಿಗಳಲ್ಲೂ ಸಹ ಅವ್ಯವಹಾರ ಕಂಡರೆ ನಾನ್ನ ಪಾಲುಗಾರಿಕೆ ಇದ್ದರೆ ರಾಜ್ಯದಲ್ಲಿ ಈಗ ಅವರದೇ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಬೇಕಿದ್ದರೆ ಸಿಬಿಐ ತನಿಖೆ ನಡೆಸಲಿ ಅವ್ಯವಹಾರ ಸಾಬೀತಾದರೆ ತಮ್ಮ ಶಾಸಕ ಸ್ಥಾನದಿಂದ ರಾಜಿನಾಮೆ ನೀಡುವುದಾಗಿ ಸವಾಲು ಹಾಕಿದರು.
ನಿಡಶೇಸಿ ಕೆರೆ ದಡದ ಮೂಲಕವೇ ಸ್ವಗ್ರಾಮ ಕೊರಡಕೇರೆಗೆ ನಿತ್ಯ ಸಂಚರಿಸುವ ದೊಡ್ಡನಗೌಡ ಪಾಟೀಲ್, ಕೆರೆ ಪ್ರದೇಶದಲ್ಲಿ ನಡೆಯುತಿದ್ದ ಕಾಮಗಾರಿಯನ್ನು ಪರಿಶೀಲಿಸಬೇಕಾಗಿತ್ತು. ಕಳಪೆ ಕಾಮಗಾರಿ ನಡೆದಿದ್ದರೆ ಆಗಲೇ ಪ್ರಶ್ನಿಸಬೇಕಿತ್ತು ಎಂದು ಕುಟುಕಿದ ಬಯ್ಯಾಪುರ, ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಪ್ರಚಾರ ಪಡೆಯಬೇಕು ಎಂಬ ನಿಟ್ಟಿನಲ್ಲಿ ದೊಡ್ಡನಗೌಡ ಸುಳ್ಳು ಆರೋಪ ಮಾಡುತಿದ್ದಾರೆ. ಎರಡು ಬಾರಿ ಶಾಸಕರಾಗಿ ಅಧಿಕಾರ ನಡೆಸಿದ್ದಾರೆ ಈ ರೀತಿ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ಕಳೆದ ವರ್ಷ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಕೆರೆ ಪುನಶ್ಚೇತನ ಕೆಲಸ ನಡೆಯುತಿತ್ತು. ಹೆಚ್ಚಿನ ಕೆರೆ ಅಭಿವೃದ್ಧಿಗಾಗಿ ಅಂದಿನ ಸಚಿವರೊಂದಿಗೆ ಚರ್ಚಿಸಿ ಸರ್ಕಾರದಿಂದ ೩ ಕೋಟಿ ರು. ಮಂಜೂರು ಮಾಡಿಸಿದ್ದೇನೆ. ಅದರಲ್ಲಿ ಸಣ್ಣ ನೀರಾವರಿ ಇಲಾಖೆ ೧ ಕೋಟಿ ರೂಪಾಯಿ ವೆಚ್ಚದ ಕೆರೆ ಪ್ರದೇಶದ ಬಂಡು ಏರಿ ನಿರ್ಮಾಣ ಕಾಮಗಾರಿ ಟೆಂಡರ್ ಕರೆದು ಕಾಮಗಾರಿ ಮುಗಿಸಿದೆ. ಕಾಮಗಾರಿ ನಡೆಸಿರುವ ಬಗ್ಗೆ ದಾಖಲೆಗಳಿವೆ ಅದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಯಾರೂ ಕೂಡ ಇನ್ನುಳಿದ ೨ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಆರಂಭವಾಗುವುದನ್ನು ತಡೆ ಹಿಡಿದಿಲ್ಲ. ಕೊವೀಡ್-೧೯ ಹಿನ್ನೆಲೆ ಸರ್ಕಾರ ಯಾವುದೇ ಕಾಮಗಾರಿಗಳನ್ನು ನಡೆಸದಂತೆ ಸೂಚಿಸಿದ್ದರಿಂದ ಕೆರೆ ಅಭಿರ್ವದ್ದಿ ಕಾಮಗಾರಿ ಸ್ಥಗಿತಗೊಂಡಿತು. ಕೆಲ ದಿನಗಳಲ್ಲಿ ಇನ್ನುಳಿದ ೨ ಕೋಟಿ ರು. ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸುದ್ದಿಗಾರರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಮೈನುದ್ದೀನ್ ಮುಲ್ಲಾಶ, ಮುಖಂಡರಾದ ಶೇಖರಗೌಡ ಮಾಲಿಪಾಟೀಲ್, ಸೋಮಶೇಖರ ವೈಜಾಪೂರ, ಶಿವಶಂಕರಗೌಡ ಪಾಟೀಲ್, ಉಮೇಶ ಮಂಗಳೂರು ಸೇರಿದಂತೆ ಮೊದಲಾದವರಿದ್ದರು.