Saturday, August 13, 2022

Latest Posts

ಕೊಪ್ಪಳ | ಬಂಜರು ಜಮೀನಿನಲ್ಲಿ ಅಂಜೂರ ಬೆಳೆಸಿ ರೈತರಿಗೆ ಮಾದರಿಯಾದ ಪದವೀಧರ ಕೃಷಿಕ..!

ಕೊಪ್ಪಳ:  ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ  ಎನ್ನುವಂತೆ  ಪದವಿ ಮುಗಿಸಿದರೂ ಕೂಡ  ಸುಮ್ಮನೆ ಕೂಡದೇ ಬಂಜರು ಜಮೀನಿನಲ್ಲಿ ಅಂಜದೇ ಅಂಜೂರ ಬೆಳೆದ ರೈತರಿಗೆ ಮಾದರಿಯಾಗಿದ್ದಾರೆ.
“ಭತ್ತದ ಕಣಜ” ಎಂದೇ ಪ್ರಸಿದ್ಧಿಗೊಂಡ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ತೋಟಗಾರಿಕೆ ಮುಂಚೂಣಿಗೆ ಬರುತ್ತಿದೆ.  ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳ ಪರಿಶ್ರಮ ಹಾಗೂ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ರೈತಪರ ಯೋಜನೆಗಳಿಂದಾಗಿ ರೈತರು ತೋಟಗಾರಿಕೆಯತ್ತ ತಮ್ಮ ಚಿತ್ತ ಹರಿಸುತ್ತಿದ್ದಾರೆ.  ಭತ್ತದ ಕೃಷಿ ಲಾಭದಾಯಕವಾಗದೇ, ವರ್ಷಕ್ಕೆ ಒಂದೇ ಬೆಳೆ, ಅವೈಜ್ಞಾನಿಕ ರಾಸಾಯನಿಕ ಬಳಕೆಯಿಂದಾಗಿ ಬಂಜರು ಜಮೀನಾಗುತ್ತಿರುವುದು ಹಾಗೂ ಪರಿಸರ ಕಲುಷಿತಗೊಳ್ಳುತ್ತಿರುವುದು, ಈ ಎಲ್ಲಾ ಕಾರಣಗಳಿಂದ ಭತ್ತ ಬೆಳೆಯುವ ರೈತರು ತೋಟಗಾರಿಕೆ ಆರಂಭಿಸಿ ಲಾಭದ ಜೊತೆಗೆ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ.  ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆಯಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಆದಾಯದ ಜೊತೆಗೆ ಮನಸ್ಸಿಗೆ ನೆಮ್ಮದಿಯೂ ಸಿಕ್ಕಿದೆ.
ಕೃಷಿಕ ರಾಜಶೇಖರ ಪಾಟೀಲ್ ಹೊಸಳ್ಳಿ, ಇವರು ಒಬ್ಬ ಪದವೀಧರರಾಗಿದ್ದು, ವ್ಯಾಪಾರ ಮತ್ತು ಕೃಷಿ ಕಾರ್ಯ ಮಾಡುತ್ತಿದ್ದಾರೆ. ಕನಕಗಿರಿ ಹೋಬಳಿಯ ಬಂಕಾಪೂರ ಗ್ರಾಮದಲ್ಲಿನ ಭೂಮಿ ಸಂಪೂರ್ಣ ಕಲ್ಲು ಬಂಡೆಗಳಿಂದ ಕೂಡಿತ್ತು.  ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಫಲವತ್ತಾದ ಭೂಮಿ ಇರದೇ ಏನೂ ಮಾಡದ ಪರಿಸ್ಥಿತಿ. ಆದರೆ ಕೈಕಟ್ಟಿ ಕುಳಿತುಕೊಳ್ಳದೆ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹಾಂತೇಶ ರವರನ್ನು ಭೇಟಿಯಾಗಿ ಚರ್ಚಿಸಿದಾಗ ಬಂಜರು ಭೂಮಿಗೆ ಯೋಗ್ಯ ಬೆಳೆ ಅಂಜೂರ, ಪೇರಲ ಬೆಳೆಯಲು ಸಲಹೆ ನೀಡಿದ್ದಾರೆ.  ಇದರಿಂದ  ಜೂನ್-2019 ತಿಂಗಳಲ್ಲಿ ಡಯಾನ ಅಂಜೂರ ತಳಿ ತರಿಸಿ 6*6 ಅಂತರದಲ್ಲಿ ನಾಟಿ ಮಾಡಿ ಸಾಕಷ್ಟು ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರಗಳನ್ನು ಬಳಸಿ ಹನಿ ನೀರಾವರಿ ಅಳವಡಿಸಿ ನಾಟಿ ಮಾಡಿದ್ದಾರೆ.  ನಂತರವೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರ ಸಲಹೆಯಂತೆ ಉತ್ತಮ ಪೋಷಣೆ ಮಾಡಿದ ರಾಜಶೇಖರ ಪಾಟೀಲ್ ಹೊಸಳ್ಳಿರವರ ತೋಟದಲ್ಲಿ ಫೆಬ್ರವರಿ-2020 ರಿಂದಲೇ ಹಣ್ಣುಗಳ ಇಳುವರಿ ಶುರುವಾಗಿದೆ.  ಆರಂಭದ ಹಂತದಲ್ಲಿ 1 ರಿಂದ 2 ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಈಗ ಹೆಚ್ಚಿಗೆ ಬರಲಾರಂಬಿಸಿದೆ.
“ಬರಿ ಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯಲ್ಲಿ ಉತ್ತಮ ಫಸಲು ಪಡೆದು ಆರ್ಥಿಕ ಲಾಭ ಪಡೆಯುತ್ತಿರುವ ರೈತ ರಾಜಶೇಖರ ಪಾಟೀಲ್ ಹೊಸಳ್ಳಿ ರವರು ಇತರರಿಗೂ ಮಾದರಿ, ಅವರ ಪರಿಶ್ರಮ ಶ್ಲಾಘನೀಯ”, ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಶಿವಯೋಗಪ್ಪ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿಕ ರಾಜಶೇಖರ ಪಾಟೀಲ್ ಮೊ.ಸಂ. 9448373695, ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮೊ.ಸಂ. 9743518608, ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ.ಸಂ. 9482289006, ಇವರನ್ನು ಸಂಪರ್ಕಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss