Thursday, August 11, 2022

Latest Posts

ಕೊಪ್ಪಳ ಮಾವು ಶೀರ್ಷಿಕೆ ಬಿಡುಗಡೆ: ಕೇಸರ್ ಮಾವು ತಳಿಗೆ ಅತಿ ಹೆಚ್ಚಿನ ಬೇಡಿಕೆ

ಕೊಪ್ಪಳ: ಜಿಲ್ಲಾಡಳಿತ, ಕೊಪ್ಪಳ ತೋಟಗಾರಿಕೆ ಇಲಾಖೆ(ಜಿಪಂ), ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ(ನಿ.), ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕೊಪ್ಪಳ ಮಾವು ಶೀರ್ಷಿಕೆ ಬಿಡುಗಡೆಗೊಳಿಸಲಾಯಿತು.

ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಇಂದು ಸರಳ ಸಮಾರಂಭದಲ್ಲಿ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಕೊಪ್ಪಳ ಮಾವು ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಕೇಸರ್, ಆಪುಸ್, ಬೆನೆಸಾನ್, ಸಿಂಧೂರ್, ದಸೇರಿ ತಳಿಯ ಹಣ್ಣುಗಳು ಸೇರಿದಂತೆ 14 ತಳಿಯ ಮಾವುಗಳನ್ನು ಜಿಲ್ಲೆಯ ಮಾವು ಬೆಳೆಗಾರರಿಂದ ಖರೀದಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ತಳಿಗಳಲ್ಲಿ ಕೇಸರ್ ತಳಿ ಅತಿ ಬೇಡಿಕೆ ತಳಿಯಾಗಿದೆ. ಈ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ, ಬಾಕ್ಸ್ ಗಳ ಮುಖಾಂತರ 2.5 ಕೆ.ಜಿ. ಮಾವಿನ ಹಣ್ಣಿಗೆ ರೂ. 250 ರಂತೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ಸಂಚಾರಿ ವಾಹನಗಳಲ್ಲಿ ಪ್ರತಿ ವಾರ್ಡ್ಗಳಿಗೆ ಹೋಗಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದು.

ಉಪ್ಪಿನ ಕಾಯಿಗಾಗಿ ಬಳಸುವ ಕುನಾಸ್/ ರುಮೇನಿಯಾ ತಳಿಯ ಮಾವಿನ ಕಾಯಿಯನ್ನು ಪ್ರತಿ ಕೆ.ಜಿ. ಗೆ ರೂ. 30 ರಂತೆ ಒಂದು ಬಾಕ್ಸ್ಗೆ ರೂ. 100 ರಂತೆ ಮಾರಾಟ ಮಾಡಲಾಗುತ್ತಿದೆ. ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮಾರ ಬಯಸುವ ರೈತರು ಅಥವಾ ಖರೀದಿರಾರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸುವ ಮೂಲಕ ರೈತರು ತಾವು ಬೆಳೆದ ಮಾವಿನ ಹಣ್ಣುಗಳ ಮಾರಾಟದ ಮಾಹಿತಿ ಪಡೆಯಬಹುದಾಗಿದೆ.

ಕೊಪ್ಪಳ ಮಾವು ಬ್ರಾಂಡ್ ಪಾಕೆಟ್‌ಗಳನ್ನು ರೈತರಿಗೆ ನೀಡಲಾಗುತ್ತಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಂಡು ಮಾವು ಮಾರಾಟ ಮಾಡಬಹುದಾಗಿದೆ.

ಸಮಾರಂಭದಲ್ಲಿ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಉತ್ಪನ್ನಗಳ ಖರೀದಿದಾರರ, ರಫ್ತುದಾರರ ಮತ್ತು ಸಂಸ್ಕರಣೆದಾರರ ಹಾಗೂ ಶೈತ್ಯಾಗಾರಗಳ ವಿವರಗಳನ್ನು ಹೊಂದಿದ ರೈತರ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.

ನಂತರ ಕೊಪ್ಪಳ ಮಾವು ಮಾರಾಟದ ಸಂಚಾರಿ ವಾಹನಗಳಲ್ಲಿ ಇಡಲಾಗಿದ್ದ ಮಾವುಗಳನ್ನು ಸಂಸದರು, ಶಾಸಕರು ವೀಕ್ಷಿಸಿದರು ಮತ್ತು ಸಂಸದರಾದ ಸಂಗಣ್ಣ ಕರಡಿಯವರು ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಂಟಿ ಕೃಷಿ ನಿರ್ದೇಶಕಿ ಶಬಾನ್ ಎಂ. ಶೇಖ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರು, ಮಾವು ಬೆಳೆಗಾರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss