ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ “ಫಿಟ್ ಇಂಡಿಯಾ” ಕಾರ್ಯಕ್ರಮ ಪ್ರಯುಕ್ತ ರಾಜ್ಯವನ್ನು “ಫಿಟ್ ಕರ್ನಾಟಕ”ವನ್ನಾಗಿಸಲು ಪೊಲೀಸ್ ಇಲಾಖೆಯಿಂದ ಅಕ್ಟೋಬರ್ 1 ರಿಂದಲೇ ಆರೋಗ್ಯಕ್ಕಾಗಿ ಓಟ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಕೆ.ಎಸ್.ಆರ್.ಪಿ ಎ.ಡಿ.ಜಿ.ಪಿ ಆಲೋಕ್ ಕುಮಾರ್ ಹೇಳಿದರು.
ಇಂಡಿಯಾ ರಿಸರ್ವ್ ಬಟಾಲಿಯನ್ ಮುನಿರಾಬಾದ್ ಘಟಕದ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ “ಆರೋಗ್ಯಕ್ಕಾಗಿ ಓಟ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರನ್ನು ರಕ್ಷಣೆ ಮಾಡುವಂತಹ ಪೊಲೀಸ್ ಮೊದಲು ಸದೃಢರಾಗಿರಬೇಕು. ದೇಶ ಕಾಯುವ ಸೈನಿಕರನ್ನು ಹಾಗೂ ಅವರ ಫಿಟ್ನೆಸ್ ಅನ್ನು ನೋಡಿದ ತಕ್ಷಣ ಸಾಮಾನ್ಯವಾಗಿ ಜನರಿಗೆ ಭಯ, ಗೌರವ ಬರುತ್ತದೆ. ಅದೇ ರೀತಿ ಪೊಲೀಸರು ಸಹ ದೈಹಿಕವಾಗಿ ಸದೃಢರಾಗಬೇಕಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಕೆ.ಎಸ್.ಆರ್.ಪಿ ಶಾಲೆಗಳಲ್ಲಿ ಪ್ರತಿ ದಿನ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಓಟವನ್ನು ಹಮ್ಮಿಕೊಂಡಿದ್ದೇವೆ. “ಆರೋಗ್ಯಕ್ಕಾಗಿ ಓಟ” ಇಂತಹ ಕಾರ್ಯಕ್ರಮಗಳನ್ನು ಬರೀ ಬೆಂಗಳೂರು, ಮುಂಬೈಗಳಂತಹ ದೊಡ್ಡ ಪ್ರದೇಶಗಳಲ್ಲಿ ಮಾತ್ರ ಹಮ್ಮಿಕೊಂಡರೆ ಸಾಲದು. ಗ್ರಾಮೀಣ, ನಗರ ಎಲ್ಲಾ ಪ್ರದೇಶಗಳಲ್ಲಿಯೂ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂಬುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಮುನಿರಾಬಾದ್ ಕೆ.ಎಸ್.ಆರ್.ಪಿ ತರಬೇತಿ ಶಾಲೆ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳು, ಕಮಾಂಡೆಟ್, ವೈಸ್ ಕಮಾಂಡೆಟ್ಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸ್ವತಃ ಎ.ಡಿ.ಜಿ.ಪಿ ರವರು ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಅಲ್ಲದೇ ಐ.ಆರ್.ಬಿ ವಿವಿಧ ಘಟಕಗಳ ಕಮಾಂಡೆಟ್, ವೈಸ್ ಕಮಾಂಡೆಟ್, ಅಧಿಕಾರಿಗಳು, ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಪಿ ಘಟಕದ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮುನಿರಾಬಾದ್ನ ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಮುದ್ದೇಪಾಲ, ಕಮಾಂಡೆಟ್, ವೈಸ್ ಕಮಾಂಡೆಟ್ಗಳು ಸೇರಿದಂತೆ ಪ್ರಶಿಕ್ಷಣಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
7 ಕಿ.ಮೀ.ದೂರ ಓಟ
ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮವು ಮುನಿರಾಬಾದ್ ಐ.ಆರ್.ಬಿ. ಘಟಕದ ಮುಖ್ಯದ್ವಾರದಿಂದ ಪ್ರಾರಂಭಗೊಂಡು, ರಾಷ್ಟ್ರೀಯ ಹೆದ್ದಾರಿ ಯಿಂದ ನಿಂಗಾಪುರ, ಮುನಿರಾಬಾದ್ ಮಾರ್ಗವಾಗಿ ತುಂಗಭದ್ರಾ ಜಲಾಶಯದ ಪ್ರವೇಶ ದ್ವಾರದವರೆಗೆ ಸುಮಾರು 7 ಕಿ.ಮೀ ದೂರದವರೆಗೆ ಸಾಗಿತು.