ಮಂಗಳೂರು: ಚೌಕಿ ರಂಗಿನ ಮನೆ ಕನ್ನಡ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರದ ನಿರ್ದೇಶಕ ಸಿ.ಎಸ್. ಜಯಪ್ರಕಾಶ್ ತಿಳಿಸಿದರು.
ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ವಿಳಂಬವಾಗಿದೆ. ಚೌಕಿ ಚಿತ್ರ ಪ್ರಾರಂಭದಲ್ಲಿ ಟೆಲಿಫಿಲಂ ಆಗಿ ರೂಪುಗೊಂಡಿದ್ದು, ಬಳಿಕ ಅದು ಸಿನಿಮಾವಾಗಿ ಮಾಡಲು ನಿರ್ಧರಿಸಲಾಯಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಚೌಕಿ ವಿಭಿನ್ನ, ಕಲಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ಬಂಟ್ವಾಳದ ಸುತ್ತಮುತ್ತ, ಕಾರಿಂಜ, ನರಹರಿ ಬೆಟ್ಟ, ಮುನ್ನೂರು, ವಿಟ್ಲ, ಬಿ.ಸಿ.ರೋಡ್ನಲ್ಲಿ ಚಿತ್ರೀಕರಣ ಮಾಡಿ ಪ್ರಯೋಗಾತ್ಮಕವಾಗಿ ರೂಪುಗೊಂಡಿದೆ. ಚಿತ್ರಕ್ಕೆ ಎಂ.ಎನ್. ಸ್ವಾಮಿ ಅವರ ಸಂಕಲನ, ಹಾಡಿಗೆ ವಿಜೇಶ್ ದೇವಾಡಿಗ ಹಾಗೂ ನಿಶ್ಚಲ್ ದಂಬೆಕೋಡಿ ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಗಾಯಕ ರಾಜೇಶ್ ಕೃಷ್ಣನ್, ಅನುರಾಧಾ ಭಟ್ ಮತ್ತು ಚೇತನ್ರಾಮ್ ಹಾಡಿದ್ದಾರೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ಹಾಸನದ ಶಕೀಲ್ ಅಹಮದ್ ನೀಡಿದ್ದಾರೆ. ಸುರೇಶ್ ದೇರಳಕಟ್ಟೆ ಪರಿಕಲ್ಪನೆ ಹಾಗೂ ಸಂಭಾಷಣೆ ಜತೆಗೆ ಚಿತ್ರಕ್ಕೆ ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ ಎಂದರು.
ರಾಜ್ಯ ಸರಕಾರ ಸಿನಿಮಾ ಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿದ ಬಳಿಕ ಪರಿಸ್ಥಿತಿಯನ್ನು ನೋಡಿ ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.
ಸಾಹಿತ್ಯ ರಚನೆ ಮಾಡಿದ ವಿಜೇಶ್ ದೇವಾಡಿಗ, ಛಾಯಾಗ್ರಾಹಕ ಸುರೇಶ್ ದೇರಳಕಟ್ಟೆ ಉಪಸ್ಥಿತರಿದ್ದರು.