ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು ಒಂದೇ ದಿನ ೨೦೪ ಮಂದಿಯಲ್ಲಿ ಸೋಂಕು ದೃಢಪಟ್ಟು ಏಳು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನೊಂದೆಡೆ ಸೋಂಕಿತ ಎಸ್ಎಸ್ಎಲ್ಸಿ ವಿದ್ಯಾರ್ಥಿ ಪ್ರಯಾಣ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಮನಕೆರೆ ಸರ್ಕಾರಿ ಪ್ರೌಢಶಾಲೆಯ 15 ವರ್ಷದ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡಿದೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿದ್ದ ಬಾಲಕ ಯಾವುದೇ ಸೋಂಕಿತರ ಸಂಪರ್ಕದಲ್ಲಿಲ್ಲದಿದ್ದರೂ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.
ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಶಾಲೆ ರಜಾ ಇರುವ ಕಾರಣ ವಿದ್ಯಾರ್ಥಿಗಳ ಸಂಪರ್ಕವಿಲ್ಲದಿರುವುದು ಸದ್ಯ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 6345ಕ್ಕೆ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 3195 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಯಾದಗಿರಿಯಲ್ಲಿ ಮತ್ತೆ ಬರೋ ಬ್ಬರಿ 66 ಮಂದಿಗೆ ಸೋಂಕು ಕಾಣಿಸಿಕೊಂಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 735 ಆಗಿದೆ. ಕಳೆದೆರಡು ದಿನಗಳಿಂದ ಯಾವುದೇ ಪ್ರಕರಣ ದಾಖಲಾಗದ ಉಡುಪಿಯಲ್ಲಿ 22 ಮಂದಿಗೆ ಕೋವಿಡ್ ದೃಢವಾಗಿದೆ.
ರಾಜ್ಯಕ್ಕೆ ಅತೀ ಹೆಚ್ಚು 969 ಸೋಂಕಿತರನ್ನು ಹೊಂದಿದ ಜಿಲ್ಲೆಯಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ದೃಢವಾಗಿರುವ 17 ಮಂದಿಯಲ್ಲಿ ಬಿಎಂಟಿಸಿ ಚಾಲಕ ನಿರ್ವಾಹಕ, ಪೊಲೀಸ್ ಪೇದೆ ಹಾಗೂ ಶಸ್ತ್ರ ಚಿಕಿತ್ಸೆಗಾಗಿ ಬಂದಿರುವ ಚಿತ್ರದುರ್ಗದ ಗರ್ಭಿಣಿಯ ಪ್ರಯಾಣ ಹಿನ್ನೆಲೆ ರಾಜಧಾನಿ ಜನರಲ್ಲಿ ಕಳವಳ ಮೂಡಿಸಿದೆ.
ಕಲಬುರಗಿಯಲ್ಲಿ 16, ರಾಯಚೂರು 15, ಬೀದರ್ 14, ಶಿವಮೊಗ್ಗ 10, ದಾವಣಗೆರೆ 09, ಕೋಲಾರ 06, ಮೈಸೂರು, ರಾಮನಗರ ತಲಾ 05, ಬಾಗಲಕೋಟೆ 03, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಧಾರವಾಡ ತಲಾ 2, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಹಾಗೂ ಕೊಪ್ಪಳದಲ್ಲಿ ತಲಾ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ.
ಬೆಂಗಳೂರಿನಲ್ಲೇ 6 ಬಲಿ: ಒಂದೇ ದಿನ 7 ಮಂದಿಯನ್ನು ಬಲಿ ಪಡೆದಿರುವ ಕೊರೋನಾಗೆ ಬೆಂಗಳೂರು ನಗರದಲ್ಲಿಯೇ 6 ಮಂದಿ ಮೃತಪಟ್ಟಿದ್ದು, ರಾಯಚೂರು ಜಿಲ್ಲೆಯ 28 ವರ್ಷದ ಯುವತಿ ಮೃತರಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.