Thursday, June 30, 2022

Latest Posts

ಕೊರೋನಾದಿಂದ ಕಳೆಗುಂದಿದ ಮಡಿಕೇರಿ ದಸರಾ: ಸಾಂಪ್ರದಾಯಿಕ ಉತ್ಸವಕ್ಕೆ ದೇವಾಲಯಗಳಲ್ಲಿ ಸಿದ್ಧತೆ

ಮಡಿಕೇರಿ: ಐತಿಹಾಸಿಕ ಹಿನ್ನೆಲೆ ಇರುವ ಮಡಿಕೇರಿ ದಸರಾದ ದಶಮಂಟಪಗಳ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ಸಂಜೆ ನಗರದ ವಿವಿಧ ದೇವಾಲಯಗಳಿಂದ ಮಂಟಪಗಳು ಹೊರಡಲಿವೆ.
ಸಾಮಾನ್ಯವಾಗಿ ಚಿನ್ನದ ಅಂಬಾರಿ ಮೆರವಣಿಗೆಯ ಮೂಲಕ ಮೈಸೂರು ದಸರಾ ಹಗಲಿನಲ್ಲಿ ಜನರನ್ನು ತನ್ನತ್ತ ಆಕರ್ಷಿಸಿದರೆ, ಕಗ್ಗತ್ತಲನ್ನು ಓಡಿಸಿ ಕತ್ತಲೆಗೆ ಬೆಳಕಿನ ಚಿತ್ತಾರ ಮೂಡಿಸುವ ಕೃತಕ ಬೆಳಕು ಅಬ್ಬರಿಸಿ-ಬೊಬ್ಬಿರಿಯುವ ರಕ್ಕಸರು, ಶಸ್ತ್ರಧಾರಿ ದೇವಾನುದೇವತೆಗಳ ಹೂಂಕಾರದಿಂದ ಕೂಡಿದ ದಶಮಂಟಪಗಳ ಶೋಭಾಯಾತ್ರೆ ಮಡಿಕೇರಿಯ ದಸರಾ ರಾತ್ರಿಯಿಡೀ ನಡೆಯುವ ಮೂಲಕ ದೇವಲೋಕವನ್ನೇ ಧರೆಗೆ ಇಳಿಸುತ್ತದೆ.

ಮಡಿಕೇರಿ ನಗರದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವಾಲಯಗಳಿಂದ ಹೊರಡುವ ಕರಗಗಳು ಹಾಗೂ ಈ ದೇವಾಲಯಗಳ ಸಹಿತ ಹತ್ತು ದೇವಾಲಯಗಳಿಂದ ಹೊರಡುವ ದಶಮಂಟಪಗಳು ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಾಗಿವೆ. ಈ ಮಂಟಪಗಳಿಗಾಗಿ ಪ್ರತೀ ದೇವಾಲಯಗಳು ವರ್ಷಂಪ್ರತಿ 15-20 ಲಕ್ಷ ರೂ.ಗಳವರೆಗೂ ವೆಚ್ಚ ಮಾಡುವುದರೊಂದಿಗೆ ವಿಜಯದಶಮಿಯ ರಾತ್ರಿ ಸೇರುವ ಲಕ್ಷಾಂತರ ಮಂದಿಗೆ ಮನರಂಜನೆ ಒದಗಿಸುತ್ತವೆ.

ಈ ಬಾರಿ ಜನರೇ ಸೇರದ ದಸರಾ: ಕಳೆದ ಎರಡು ವರ್ಷಗಳಲ್ಲಿ ಪ್ರಕೃತಿ ವಿಕೋಪದ ಕರಿಛಾಯೆಯ ನಡುವೆಯೂ ಮಡಿಕೇರಿ ದಸರಾ ಕಳೆಗುಂದದೆ ಲಕ್ಷಾಂತರ ಮಂದಿಯನ್ನು ತನ್ನೆಡೆಗೆ ಆಕರ್ಷಿಸಿತ್ತು. ಆದರೆ ಜನೋತ್ಸವವಾಗಿ ಆಚರಿಸಲ್ಪಡುತ್ತಿದ್ದ ಮಡಿಕೇರಿ ದಸರಾ ಇದೇ ಮೊದಲ ಬಾರಿಗೆ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ, ಜನರೇ ಸೇರದ ರೀತಿಯಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ.

ಎರಡು-ಮೂರು ಟ್ರ್ಯಾಕ್ಟರ್‍ಗಳಲ್ಲಿ ದೇವಾನುದೇವತೆಗಳು, ರಕ್ಕಸರ ಕಲಾಕೃತಿಗಳನ್ನು ಬಳಸಿ ಚಲನವಲನದೊಂದಿಗೆ ಪೌರಾಣಿಕ ಕಥೆಗಳನ್ನು ಸಾರುವ ದಶಮಂಟಪಗಳ ಬದಲಾಗಿ ಈ ಬಾರಿ ಎಲ್ಲಾ ದೇವಾಲಯಗಳ ದಸರಾ ಸಮಿತಿಗಳು ಕೇವಲ ಪಿಕಪ್ ವಾಹನದಲ್ಲಿ ತಲಾ ಒಂದೊಂದು ಮೂರ್ತಿ ಹಾಗೂ ಕಲಶವನ್ನಿಟ್ಟು ಬನ್ನಿ ಮಂಟಪದವರೆಗೆ ಮೆರವಣಿಗೆಯಲ್ಲಿ ಸಾಗಿ ಬನ್ನಿ ಕಡಿಯುವ ಮೂಲಕ ನವರಾತ್ರಿಯ ಉತ್ಸವಕ್ಕೆ ತೆರೆ ಎಳೆಯಲಿವೆ.

ದಶಮಂಟಪಗಳ ಮೆರವಣಿಗೆಯಲ್ಲಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರತೀ ಮಂಟಪದೊಂದಿಗೆ ತಲಾ 20 ಮಂದಿಗಷ್ಟೇ ತೆರಳಲು ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸಲು ದಸರಾ ಸಮಿತಿಯೂ ನಿರ್ಧರಿಸಿದ್ದು, ಸಾರ್ವಜನಿಕರು ಸರಳ ಹಾಗೂ ಸಾಂಪ್ರದಾಯಿಕ ದಸರಾಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದೆ.

ಪ್ರತೀ ವರ್ಷ ದಶಮಂಟಪಗಳು ಬಹುಮಾನಗಳಿಗಾಗಿ ಪೈಪೋಟಿ ನಡೆಸುತ್ತಿದ್ದರೆ, ಈ ಬಾರಿ ಮಂಟಪಗಳ ಪ್ರದರ್ಶನ ಹಾಗೂ ಸ್ಪರ್ಧೆಗೆ ಅವಕಾಶವಿಲ್ಲ ಎಂದು ಸಮಿತಿ ಈಗಾಗಲೇ ತಿಳಿಸಿದೆ. ಇದರಿಂದಾಗಿ ಆಯುಧ ಪೂಜೆಯ ದಿನದಿಂದಲೇ ಜನದಟ್ಟಣೆಯಿಂದ ತುಂಬಿರುತ್ತಿದ್ದ ಮಡಿಕೇರಿ ನಗರ ಈ ಬಾರಿ ಬಿಕೋ ಎನ್ನುತ್ತಿದೆ.

ದಸರಾ ಹಿನ್ನೆಲೆಯಲ್ಲಿ ಕೊಡಗಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆಗಳಿರುವುದನ್ನು ಮನಗಂಡು ಜಿಲ್ಲಾಡಳಿತ ದಿನದ ಮಟ್ಟಿಗೆ ಕೊಡಗಿನ ಪ್ರವಾಸಿ ತಾಣಗಳನ್ನೂ ಬಂದ್ ಮಾಡಿಸಿದೆ. ಇದರೊಂದಿಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗ್ಗೆ 6ಗಂಟೆಯವರೆಗೆ ಮದ್ಯ ಮಾರಾಟವನ್ನೂ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರೊಂದಿಗೆ ದಶಮಂಟಪಗಳ ಮೆರವಣಿಗೆಯನ್ನು ರಾತ್ರಿ 10ಗಂಟೆಯೊಳಗಾಗಿ ಮುಗಿಸುವಂತೆಯೂ ತಾಕೀತು ಮಾಡಿದೆ.

ದಸರಾದಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಡಳಿತ ಈಗಾಗಲೇ ಸೂಚನೆ ನೀಡಿದ್ದು, ಕೊರೋನಾ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಸರಕಾರವೂ ಸಮರ್ಥಿಸಿಕೊಂಡಿದೆ.

ನೂರಾರು ವರ್ಷಗಳ ಹಿಂದೆ ಪಲ್ಲಕ್ಕಿಯ ಮೂಲಕ ದೇವರ ಮೆರವಣಿಗೆ ನಡೆಸುವ ಮೂಲಕ ಆರಂಭವಾದ ಮಡಿಕೇರಿ ದಸರಾ 1962 ಚೀನಾ-ಭಾರತ ಯುದ್ಧದ ಸಂದರ್ಭದಲ್ಲೂ ಕರಗಗಳ ಮೆರವಣಿಗೆಯೊಂದಿಗೆ ತಡೆಯಲ್ಲದೆ ನಡೆದಿತ್ತು. ಇದೀಗ ಮತ್ತೊಮ್ಮೆ ಮಡಿಕೇರಿ ದಸರಾ ಸಾಂಪ್ರದಾಯಿಕ ಪೂಜೆ, ಮೆರವಣಿಗೆಯೊಂದಿಗೆ ಸಾಂಕೇತಿಕ ದಸರಾಕ್ಕೆ ಸಾಕ್ಷಿಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss